ನವದೆಹಲಿ, ಅ. 16 (DaijiworldNews/PY): ಲಡಾಖ್ನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ದೇಶಗಳ ನಡುವೆ ನಡೆಯುತ್ತಿರುವ ಚರ್ಚೆಯ ಫಲಿತಾಂಶವು ಗೌಪ್ಯವಾಗಿರಲಿದೆ ಎಂದು ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ಈ ವಿಚಾರವಾಗಿ ಬ್ಲೂಮ್ಬರ್ಗ್ ಇಂಡಿಯಾ ಎಕನಾಮಿಕ್ ಫೋರಂನಲ್ಲಿ ಮಾತನಾಡಿರುವ ಅವರು, ಗಡಿ ವಿಚಾರವಾಗಿ ಎರಡೂ ದೇಶಗಳ ನಡುವೆ ಚರ್ಚೆ ಆಗುತ್ತಲೇ ಇದೆ. ಈ ವಿಚಾರ ಸದ್ಯಕ್ಕೆ ಪ್ರಗತಿಯಲ್ಲಿದ್ದು, ಈ ಮಾತುಕತೆಯ ಸಂದರ್ಭ ಏನು ನಡೆಯುತ್ತಿದೆ ಎಂದು ಊಹಿಸಬೇಡಿ ಎಂದಿದ್ದಾರೆ.
ಭಾರತ-ಚೀನಾ ನಡುವಿನ ಮಾತುಕತೆಯಲ್ಲಿ ಏನಾಗುತ್ತಿದೆ ಎನ್ನುವ ಬಗ್ಗೆ ಸ್ಪಷ್ಟನೆ ನೀಡಿ ಎಂದು ಸುದ್ದಿಗಾರರು ಕೇಳಿರುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಅವರು, ಗಡಿ ಸಂಬಂಧದ ಮಾತುಕತೆ ಗೌಪ್ಯವಾದ ಸಂಗತಿಯಾಗಿದೆ. ಶಾಂತಿ ಹಾಗೂ ಯಥಾಸ್ಥಿತಿಯನ್ನು ಪುನಃ ಸ್ಥಾಪನೆ ಮಾಡಲು ಭಾರತ ಒತ್ತಾಯಿಸುತ್ತಿದೆ. ಈ ವಿಚಾರವನ್ನು ಭಾರತ ಚೀನಾದ ಮುಂದಿಟ್ಟಿದೆ ಎಂದು ಹೇಳಿದ್ದಾರೆ.
ಭಾರತ-ಚೀನಾ ದೇಶಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆಯ ಬಳಿಕ ಚೀನಾ ಕೂಡಾ ತನ್ನ ಸೈನ್ಯದ ಅರ್ಧದಷ್ಟು ಸೈನಿಕರು ವಾಪಾಸ್ಸು ಕರೆಸಿಕೊಂಡಿದೆ. ಆದರೆ, ಈ ನಡುವೆ ಚೀನಾ ಮತ್ತೆ ಗಡಿಯಲ್ಲಿ ಹೊಸ ಉಲ್ಲಂಘನೆಗಳ ಮುಖೇನ ಪ್ರಚೋದನಕಾರಿಯಾದಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.