ಮೀರಠ್,ಅ. 16 (DaijiworldNews/HR): ಎರಡು ವರ್ಷದ ಹಿಂದೆ ಹಾಪುರದಲ್ಲಿ 12 ವರ್ಷದ ಬಾಲಕಿಯ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಮರಣ ದಂಡನೆ ವಿಧಿಸಿ ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಸಂತ್ರಸ್ಥ ಬಾಲಕಿಯ ಸಹೋದರ ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದು, ಈತ ಸತ್ತಿದ್ದಾನೆ ಎಂದು ಅಂದಾಜಿಸಿ ಅವನನ್ನು ಬಿಟ್ಟುಹೋಗಿದ್ದರು. ಕುತ್ತಿಗೆಗೆ ಆಗಿರುವ ಗಂಭೀರ ಗಾಯದಿಂದಾಗಿ ಆತ ಮಾತನಾಡಲು ಸಾಧ್ಯವಾಗಿರಲಿಲ್ಲ. ಆದರೆ ತನಿಖೆ ಮತ್ತು ವಿಚಾರಣೆ ಹಂತದಲ್ಲಿ ಆತ ಲಿಖಿತ ಹೇಳಿಕೆ ನೀಡಿದ್ದ ಎಂದು ಪೋಕ್ಸೋ ನ್ಯಾಯಾಲಯದ ವಿಶೇಷ ಅಭಿಯೋಜಕ ಹರೇಂದ್ರ ತ್ಯಾಗಿ ಹೇಳಿದ್ದಾರೆ.
ಇನ್ನು ಈ ಇಬ್ಬರು ಆರೋಪಿಗಳು ಬಾಲಕಿ ಮೇಲೆ ಅತ್ಯಾಚಾರ ನಡೆಸುತ್ತಿದ್ದಾಗ ಬಾಲಕ ಕೂಗಿಕೊಂಡಿದ್ದ. ಈ ವೇಳೆ ಆತನ ಕತ್ತು ಸೀಳಿದ್ದು, ಆತ ಮೃತಪಟ್ಟಿದ್ದಾನೆ ಎಂದು ಭಾವಿಸಿದ್ದರು. ಬಳಿಕ ಬಾಲಕಿಯನ್ನು ಕೊಂದು ಹುಲ್ಲಿನ ಗೋದಾಮಿನಲ್ಲಿ ಶವ ಎಸೆದಿದ್ದರು ಎಂದು ತಿಳಿದು ಬಂದಿದೆ.