ಲಕ್ನೋ, ಅ. 16 (DaijiworldNews/HR): ಉತ್ತರಪ್ರದೇಶದ ಬಲ್ಲಿಯಾದಲ್ಲಿ ಮಾತಿನ ಚಕಮಕಿಯ ಪರಿಣಾಮ ಬಿಹಾರ ಬಿಜೆಪಿ ಶಾಸಕರ ಸಹಾಯಕ ಸ್ಥಳೀಯ ಅಧಿಕಾರಿಯ ಸಮ್ಮುಖದಲ್ಲಿಯೇ ವ್ಯಕ್ತಿಯೊಬ್ಬನನ್ನು ಗುಂಡಿಟ್ಟು ಹತ್ಯೆಗೈದ ಘಟನೆ ನಡೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಯನ್ನು ಅಮಾನತುಗೊಳಿಸಿ ಮುಖ್ಯಮಂತ್ರಿ ಆದಿತ್ಯನಾಥ್ ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿ ಕಾರ್ಯಕರ್ತ ಧೀರೇಂದ್ರ ಸಿಂಗ್, ಜೈಪ್ರಕಾಶ್(46) ಎಂಬವರನ್ನು ಗುಂಡಿಟ್ಟು ಹತ್ಯೆಗೈದಿದ್ದಾನೆ.
ಇನ್ನು ಗದ್ದೆಯಲ್ಲಿ ಭಾರೀ ಪ್ರಮಾಣದಲ್ಲಿ ಜನರು ಸೇರಿದ್ದ ವೇಳೆ ಈ ಘರ್ಷಣೆ ನಡೆದಿದ್ದು, ಮೂರು ಸುತ್ತು ಗುಂಡು ಹೊಡೆದು ವ್ಯಕ್ತಿಯನ್ನು ಹತ್ಯೆಗೈದಿರುವುದನ್ನು ಕಂಡು ಜನರು ಹೆದರಿ ಎಲ್ಲೆಂದರಲ್ಲಿ ಓಡಿ ಹೋಗುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಈ ಕುರಿತು ಆರೋಪಿಗಳ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೂಚನೆ ನೀಡಿರುವುದಾಗಿ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವನೀಶ್ ಕುಮಾರ್ ಅವಾಸ್ಥಿ ತಿಳಿಸಿದ್ದಾರೆ.