ನವದೆಹಲಿ, ಅ. 16 (DaijiworldNews/MB) : ಮಾವಂದಿರು ಇನ್ನು ಮುಂದೆ ಸೊಸೆಯನ್ನು ತಮ್ಮ ಮನೆಯಿಂದ ಹೊರಹಾಕಲಾಗದು. ಯಾಕೆಂದರೆ ಮಾವನ ಮನೆಯಲ್ಲಿ ವಾಸಿಸುವ ಹಕ್ಕು ಮಹಿಳೆಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ದೆಹಲಿ ನಿವಾಸಿಯೊಬ್ಬರು ದೆಹಲಿ ಹೈಕೋರ್ಟ್ನ ವಿಚಾರಣೆಯ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್.ಸುಭಾಷ್ ರೆಡ್ಡಿ ಹಾಗೂ ಎಂಆರ್ ಶಾ ಅವರನ್ನು ಒಳಗೊಂಡ ನ್ಯಾಯಾಪೀಠವು 2006ರ ತೀರ್ಪನ್ನು ರದ್ದುಪಡಿಸಿದ್ದು ಈ ತೀರ್ಪನ್ನು ನೀಡಿದೆ.
ದೂರುದಾರರ ಮಗನನ್ನು 1995ರಲ್ಲಿ ಮಹಿಳೆಯಿ ವಿವಾಹವಾಗಿದ್ದು ಇಬ್ಬರು ಮೊದಲ ಮಹಡಿಯಲ್ಲಿ ವಾಸವಾಗಿದ್ದರು. ಆದರೆ ಈ ದಂಪತಿ ನಡುವೆ 2004ರಲ್ಲಿ ಮನಸ್ತಾಪ ಉಂಟಾಗಿದ್ದು ಮಹಿಳೆಯ ಪತಿಯಾಗಿದಾತ ತಳಮಹಡಿಯ ಅತಿಥಿ ಕೋಣೆಗೆ ಸ್ಥಳಾಂತರಗೊಂಡಿದ್ದ. ಬಳಿಕ ವಿಚ್ಛೇದನಕ್ಕೆ ಮೊಕದ್ದಮೆ ಸಲ್ಲಿಸಿದ್ದ. ಮಹಿಳೆಯು ಕೌಟುಂಬಿಕ ಹಿಂಸಾಚಾರ ಕಾಯ್ದೆ ಅಡಿ ಪತಿ ಹಾಗೂ ಅವರ ಪೋಷಕರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮಹಿಳೆಯ ಹಕ್ಕುಗಳ ರಕ್ಷಣೆ ಹಾಗೂ ಉತ್ತೇಜನೆಯ ಸಾಮರ್ಥ್ಯದ ಮೇಲೆ ಯಾವುದೇ ಸಮಾಜದ ಪ್ರಗತಿ ನಿರ್ಧರಿತವಾಗುತ್ತದೆ. ಮಹಿಳೆ ತನ್ನ ಪತಿಯೊಂದಿಗೆ ವಾಸಿಸುತ್ತಿರುವ ಹಂಚಿಕೆಯ ಮನೆ ಆತನ ಸಂಬಂಧಿಕರಿಗೆ ಸೇರಿದ್ದರೂ ಕೂಡಾ ಅಲ್ಲಿ ವಾಸಿಸುವ ಹಕ್ಕನ್ನು ಮಹಿಳೆ ಪಡೆಯಲು ಅರ್ಹಳು ಎಂದು ತಿಳಿಸಿದೆ.