ಮುಂಬೈ, ಅ. 16 (DaijiworldNews/MB) : ಚಾನಲ್ಗಳನ್ನು ನಿರ್ದಿಷ್ಟ ಅವಧಿಯವರೆಗೆ ಚಾಲನೆಯಲ್ಲಿಡಲು ಎರಡು ವಾಹಿನಿಗಳು ನಮಗೆ ನೇರವಾಗಿ ಹಣ ನೀಡಿದೆ ಎಂದು ನಾಲ್ವರು ವೀಕ್ಷಕರು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಟಿಆರ್ಪಿ ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಹೇಳಿಕೆ ನೀಡಿರುವ ಈ ನಾಲ್ವರನ್ನು ಈ ಚಾನಲ್ಗಳ ವಿರುದ್ಧದ ಪ್ರಕರಣದಲ್ಲಿ ಸಾಕ್ಷಿಗಳಾಗಿ ಪರಿಗಣಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ನಾಲ್ವರ ಪೈಕಿ ಮೂವರು ತಮಗೆ ರಿಪಬ್ಲಿಕ್ ಟಿವಿ ಚಾನಲ್ಗಳನ್ನು ನಿರ್ದಿಷ್ಟ ಅವಧಿಯವರೆಗೆ ಚಾಲನೆಯಲ್ಲಿಡಲು ಹಣ ನೀಡಿದ್ದಾರೆ ಎಂದು ಹೇಳಿದ್ದು ಓರ್ವ ಸಾಕ್ಷಿದಾರ ಬಾಕ್ಸ್ ಸಿನಿಮಾ ಹಣ ನೀಡಿದೆ ಎಂದು ತಿಳಿಸಿದ್ದಾರೆ. ಈ ಮೂವರು ರಿಪಬ್ಲಿಕ್ ಟಿವಿಯ ಅಧಿಕಾರಿಗಳ ಹೆಸರನ್ನು ತಿಳಿಸಿದ್ದಾರೆ ಎಂದು ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಮಾಹಿತಿ ನೀಡಿದ್ದಾರೆ. ಆದರೆ ತನಿಖೆ ನಡೆಯುತ್ತಿರುವ ಕಾರಣದಿಂದಾಗಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ತಿಳಿಸಿದ್ದಾರೆ.
ಟಿಆರ್ಪಿ ತಿರುಚಿದ ಆರೋಪದ ಸಂಬಂಧದಲ್ಲಿ ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರು ರಿಪಬ್ಲಿಕ್ ಟಿವಿ, ಬಾಕ್ಸ್ ಸಿನೆಮಾ ಮತ್ತು ಫಕ್ತ್ ಮರಾಠಿ ವಾಹಿನಿಗಳ ವಿರುದ್ಧ ತನಿಖೆ ನಡೆಸುತ್ತಿದ್ದಾರೆ.