ಬೆಳಗಾವಿ, ಅ. 16 (DaijiworldNews/HR): ಕರ್ನಾಟಕ ಹಾಗೂ ಮುಂಬೈಯಲ್ಲಿ ಮಳೆಯಿಂದ ಅಪಾರ ಪ್ರಮಾಣದಲ್ಲಿ ಹಾನಿಯಾಗಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಬಂದು ವೀಕ್ಷಿಸಿ ಸಂತ್ರಸ್ತರ ನೆರವಿಗೆ 25 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಬೇಕು ಎಂದು ಕನ್ನಡ ಚಳವಳಿ ವಾಟಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಪ್ರವಾಹದಿಂದ ಅನೇಕ ಹಳ್ಳಿಗಳು, ಕೃಷಿಗಳು ನಾಶವಾಗಿದ್ದು, ಅದಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ’ ಎಂದು ದೂರಿದ್ದಾರೆ.
ಇನ್ನು ಬೇರೆ ರಾಜ್ಯಗಳಲ್ಲಿ ಪ್ರವಾಹ ಉಂಟಾದರೆ ಪ್ರಧಾನಿ ಅಲ್ಲಿಗೆ ಹೋಗಿ ವಿಕ್ಷಿಸಿ, ಪರಿಹಾರ ಘೋಷಿಸುತ್ತಾರೆ. ಆದರೆ, ಕರ್ನಾಟಕವನ್ನು ಕಡೆಗಣಿಸುತ್ತಿದ್ದಾರೆ. ಈ ಬಗ್ಗೆ ಶಾಸಕರು, ಸಚಿವರು, ಸಂಸದರು ದನಿ ಎತ್ತಬೇಕು. ಪ್ರಧಾನಿ ಇನ್ನಾದರೂ ಇಲ್ಲಿನ ಜನರ ಸಂಕಷ್ಟ ಪರಿಹಾರಕ್ಕೆ ಸ್ಪಂದಿಸಬೇಕು ಎಂದರು.
ಸರ್ಕಾರ ಜಾರಿಗೊಳಿಸಿರುವ ವಿದ್ಯಾಗಮ ಯೋಜನೆಯನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಬೇಕು. ಕೊರೊನಾದಿಂದ ಮಕ್ಕಳು ಅಥವಾ ಶಿಕ್ಷಕರು ಮೃತಪಟ್ಟರೆ ಕುಟುಂಬದವರಿಗೆ 1 ಕೋಟಿ ಪರಿಹಾರ ನೀಡಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.