ಬೆಂಗಳೂರು,ಅ. 16 (DaijiworldNews/HR): ಗಂಡನನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ನೋವಿನಲ್ಲಿದ್ದಾಗ ನಿನ್ನ ಗಂಡನ ಸಾವಿಗೆ ನೀನೇ ಕಾರಣ ಎಂದು ದೂಷಣೆ ಮಾಡಿ ಚುಚ್ಚು ಮಾತುಗಳಿಂದ ಮಾನಸಿಕವಾಗಿ ನನ್ನನ್ನು ಕೊಲ್ಲುವ ಪ್ರಯತ್ನ ನಡೆದಿತ್ತು ಎಂದು ಐಎಎಸ್ ಅಧಿಕಾರಿ ದಿವಂಗತ ಡಿ.ಕೆ.ರವಿ ಅವರ ಪತ್ನಿ ಕುಸುಮಾ ಹೇಳಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನ್ನ ತಂದೆ-ತಾಯಿ ನನಗೆ ಕಷ್ಟ ಎಂದರೆ ಏನು ಎಂಬುದನ್ನು ಗೊತ್ತಾಗದಂತೆ ಬೆಳೆಸಿದ್ದು, ನನ್ನನ್ನು ಉನ್ನತಾಧಿಕಾರಿಯನ್ನು ಮದುವೆಯಾದರೆ ಸುಖವಾಗಿ ಇರಬಹುದು ಎಂದು ಹೇಳಿ ಡಿ.ಕೆ.ರವಿ ಅವರಿಗೆ ಕೊಟ್ಟು ಮದುವೆ ಮಾಡಿದರು. ಐದು ವರ್ಷದ ಸಾಂಸಾರಿಕ ಜೀವನ ನಡೆದಿತ್ತು. ಆದರೆ ಇದ್ದಕ್ಕಿದ್ದಂತೆ ರವಿ ಅವರು ಸಾವನ್ನಪ್ಪಿದರು. ಹಾಗಾಗಿ 26ನೇ ವಯಸ್ಸಿಗೆ ನಾನು ವೈದವ್ಯವನ್ನು ಅನುಭವಿಸಿದೆ.
ಇನ್ನು ಗಂಡನನ್ನು ಕಳೆದುಕೊಂಡ ನೋವು, ಸಂಕಟದಲ್ಲಿ ಇದ್ದ ನನಗೆ, ಮತ್ತೊಂದೆಡೆ ರವಿ ಸಾವಿಗೆ ನೀನೇ ಕಾರಣ ಎಂಬ ಚುಚ್ಚು ಮಾತುಗಳು ನನ್ನ ಜತೆಯಲ್ಲಿ ನಿಲ್ಲಬೇಕಾದ ಕುಟುಂಬದವರೇ ನನ್ನ ವಿರುದ್ಧ ನಿಂದನೆಯ ಮಾತುಗಳನ್ನಾಡಲಾರಂಭಿಸಿದರು ಎಂದರು.
ನಾನು ನೊಂದವರಿಗೆ ಧ್ವನಿಯಾಗುತ್ತೇನೆ. ನನ್ನಂತೆ ಅನೇಕ ಸಂಕಷ್ಟ ಅನುಭವಿಸುವ ಹೆಣ್ಣುಮಕ್ಕಳಿಗೆ ಬೆಂಬಲವಾಗಿರುತ್ತೇನೆ, ಏಕೆಂದರೆ ನಾನೂ ಕೂಡ ಕಷ್ಟ ಅನುಭವಿಸಿಯೇ ಇಲ್ಲಿ ನಿಂತಿದ್ದೇನೆ ಎಂದು ಹೇಳಿದ್ದಾರೆ.