ಕಲಬುರಗಿ, ಅ. 16 (DaijiworldNews/MB) : ನೀವು ಕನ್ನಡಿಗರನ್ನು ಇಷ್ಟಪಡಲ್ಲವೇ ಅಥವಾ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಷ್ಟ ಇಲ್ವಾ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಕೆಪಿಸಿಸಿ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದ್ದಾರೆ.
ನೆರೆಪೀಡಿತ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಪರಿಹಾರದ ಭರವಸೆ ನೀಡಿರುವುದಾಗಿ ಪ್ರಧಾನಿ ಮೋದಿ ಮಾಡಿರುವ ಟ್ವೀಟ್ಗೆ ತಿರುಗೇಟು ನೀಡಿರುವ ಖರ್ಗೆಯವರು, ''ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರಿಗೆ ನೀವು ಸಹಾಯ ಮಾಡುವ ಭರವಸೆ ನೀಡಿದ್ದೀರಿ. ಆದರೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಯಾವುದೇ ಸಹಾಯವಿಲ್ಲವೇಕೆ? ಮಳೆಯಿಂದಾಗಿ ಕರ್ನಾಟಕದಲ್ಲಿ ಭಾರೀ ಹಾನಿಯಾಗಿದೆ ಹಾಗೂ ಕರ್ನಾಟಕವು ತೀವ್ರ ಮಳೆಯಿಂದಾಗಿ ಬಳಲುತ್ತಿದೆ. ನೀವು ಕನ್ನಡಿಗರನ್ನು ಇಷ್ಟಪಡಲ್ವೇ ಅಥವಾ ಬಿಎಸ್ವೈ ಇಷ್ಟ ಇಲ್ವಾ'' ಎಂದು ಪ್ರಶ್ನಿಸಿದ್ದು ''ಪ್ರತಿ ಬಾರಿ ಈ ಅನ್ಯಾಯವೇಕೆ'' ಎಂದು ಕೇಳಿದ್ದಾರೆ.