ಕಲಬುರಗಿ, ಅ. 16 (DaijiworldNews/MB) : ತನ್ನ ಮನೆ ವಾಸಕ್ಕೆ ಸುರಕ್ಷಿತವಾಗಿಲ್ಲ, ಹೊಸ ಮನೆ ಕಟ್ಟಿಸಿ ಕೊಡಿ ಎಂದು ಒತ್ತಾಯಿಸಿ ಅಜ್ಜಿಯೊಬ್ಬರು ತಮ್ಮ ಹಳೆ ಮನೆಯ ಚಾವಣಿಯ ಮೇಲೆ ಏರಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಜೇವರ್ಗಿ ತಾಲ್ಲೂಕಿನ ಫಿರೋಜಾಬಾದ್ ಗ್ರಾಮದಲ್ಲಿ ನಡೆದಿದೆ.
ಕಮಲಮ್ಮ ಎಂಬ ಅಜ್ಜಿ ಕಳೆದ ಮೂರು ದಿನಗಳಿಂದ ಈ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಅವರು ಬಂದಿದ್ದು ಈ ವೇಳೆಯೂ ಅಜ್ಜಿ ಚಾವಣಿಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಸಚಿವರು ಇದನ್ನು ಗಮನಿಸಿಲ್ಲ ಎಂದು ವರದಿ ತಿಳಿಸಿದೆ.
ಅಜ್ಜಿ ಕಳೆದ ಮೂರು ದಿನಗಳಿಂದ ಹಗಲಿಡೀ ಮನೆ ಮೇಲೆಯೇ ಕುಳಿತು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಹೇಳಿದ್ದು ಅಜ್ಜಿಯನ್ನು ಮಾತನಾಡಿಸದೆ ಹೋದ ಸಚಿವರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
''ಮಳೆ ಹಾಗೂ ಭೀಮಾ ಪ್ರವಾಹದಿಂದಾಗಿ ನನ್ನ ಮನೆ ಸಂಪೂರ್ಣವಾಗಿ ಹಾಳಾಗಿದೆ. ವಾಸ ಮಾಡಲು ಸುರಕ್ಷಿತವಾಗಿಲ್ಲ. ನನಗೆ ಹೊಸ ಮನೆ ಕಟ್ಟಿಸಿಕೊಡುವವರೆಗೂ ನಾನು ಚಾವಣಿಯಿಂದ ಇಳಿದು ಬರಲ್ಲ'' ಎಂದು ಅಜ್ಜಿ ಹೇಳಿದ್ದಾರೆ.