ಬೆಂಗಳೂರು, ಅ. 16 (DaijiworldNews/PY): ರಾಜ್ಯ ಸರ್ಕಾರಕ್ಕೆ ಪ್ರವಾಹ ಪರಿಸ್ಥಿತಿ ನಿಭಾಯಿಸುವುದಕ್ಕಿಂತಲೂ ಉಪ ಚುನಾವಣೆಯೇ ಮುಖ್ಯವಾದಂತಿದೆ. ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸುವ ಕನಿಷ್ಠ ಕಾಳಜಿಯೂ ಸರ್ಕಾರದಿಂದ ಕಾಣಿಸುತ್ತಿಲ್ಲ ಎಂದು ಮಾಜಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪ್ರವಾಹ ಪೀಡಿತ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸರ್ಕಾರ ತೆರೆದಿರುವ ಪರಿಹಾರ ಕೇಂದ್ರಗಳು ನಿರಾಶ್ರಿತರ ಪಾಲಿಗೆ ನರಕದ ಕೇಂದ್ರಗಳಾಗಿವೆ. ಸರಿಯಾದ ವ್ಯವಸ್ಥೆಯಿಲ್ಲದೆ, ಊಟ ಉಪಚಾರವಿಲ್ಲದೆ ನೆರೆ ಸಂತ್ರಸ್ತರು ಪರದಾಡುತ್ತಿರುವ ಬಗ್ಗೆ ವರದಿ ಬರುತ್ತಿದೆ. ಮನೆ ಮಠ ಇಲ್ಲದೆ ನೊಂದ ಸಂತ್ರಸ್ತರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುವುದು ಸರಿಯಲ್ಲ ಎಂದಿದ್ದಾರೆ.
ರಾಜ್ಯ ಸರ್ಕಾರಕ್ಕೆ ಪ್ರವಾಹ ಪರಿಸ್ಥಿತಿ ನಿಭಾಯಿಸುವುದಕ್ಕಿಂತಲೂ ಉಪ ಚುನಾವಣೆಯೇ ಮುಖ್ಯವಾದಂತಿದೆ. ಪ್ರವಾಹ ಪೀಡಿತರ ನೋವಿಗೆ ಸ್ಪಂದಿಸುವ ಕನಿಷ್ಠ ಕಾಳಜಿಯೂ ಸರ್ಕಾರದಿಂದ ಕಾಣಿಸುತ್ತಿಲ್ಲ. ತೋರುಗಾಣಿಕೆಯ ಪರಿಹಾರ ಕ್ರಮವನ್ನೇ ದೊಡ್ಡ ಸಾಧನೆ ಎಂದು ಬೆನ್ನು ತಟ್ಟಿಕೊಳ್ಳುತ್ತಿದೆ. ಜನರ ಶಾಪ ತಟ್ಟುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದು ತಿಳಿಸಿದ್ದಾರೆ.