ಪಂಜಾಬ್, ಅ.16 (DaijiworldNews/PY): ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತ ಮಾಜಿ ಯೋಧ ಬಲ್ವಿಂದರ್ ಸಿಂಗ್ (62) ಅವರನ್ನು ಅಪರಿಚಿತ ದುಷ್ಕರ್ಮಿಗಳ ತಂಡ ಶುಕ್ರವಾರ ಗುಂಡಿಕ್ಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ಭಿಖಿವಿಂದ್ ಗ್ರಾಮದಲ್ಲಿ ಬಲ್ವಿಂದರ್ ಸಿಂಗ್ ಅವರು ತಮ್ಮ ಕಚೇರಿಯಲ್ಲಿದ್ದ ಸಂದರ್ಭ ಮೋಟಾರ್ ಸೈಕಲ್ನಲ್ಲಿ ಬಂದ ದುಷ್ಕರ್ಮಿಗಳು ಬಲ್ವಿಂದರ್ ಸಿಂಗ್ ಅವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬಲ್ವಿಂದರ್ ಸಿಂಗ್ ಅವರು ರಾಜ್ಯದಲ್ಲಿನ ಭಯೋತ್ಪಾದನೆಯ ವಿರುದ್ದ ಎದೆಗುಂದದೇ ಹೋರಾಡಿದ್ದು, ಅವರನ್ನು ಸದೆಬಡೆದಿದ್ದರು. ಈ ಹಿನ್ನೆಲೆ ಅವರಿಗೆ 1993ರಲ್ಲಿ ಕೇಂದ್ರ ಸರಕಾರ ದೇಶದ ಅತ್ಯುನ್ನತ ಗೌರವವಾದ ಶೌರ್ಯ ಚಕ್ರ ಪ್ರಶಸ್ತಿ ನೀಡಿ ಗೌರವಿಸಿತ್ತು.
ಒಂದು ವರ್ಷದ ಹಿಂದೆ ಬಲ್ವಿಂದರ್ ಸಿಂಗ್ ಅವರ ರಕ್ಷಣೆಯನ್ನು ತಾರ್ನ್ ತರಣ್ ಪೊಲೀಸರ ಶಿಫಾರಸ್ಸಿನ ಮೇರೆಗೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡಿತ್ತು. ಸಿಂಗ್ ಅವರ ಇಡೀ ಕುಟುಂಬವೇ ಭಯೋತ್ಪಾದಕರ ಹಿಟ್ ಲಿಸ್ಟ್ನಲ್ಲಿದೆ ಎಂದು ಸಿಂಗ್ ಸಹೋದರ ರಂಜಿತ್ ಹೇಳಿದ್ದರೂ ಕೂಡಾ ಭದ್ರತಾ ರಕ್ಷಣೆಯನ್ನು ಹಿಂಪಡೆದುಕೊಳ್ಳಲಾಗಿದ್ದು, ಈ ಹತ್ಯೆಗೆ ಕಾರಣವಾಗಿದೆ ಎನ್ನಲಾಗಿದೆ.
ಸಿಂಗ್ ಅವರ ಮೇಲೆ ಈ ಹಿಂದೆ ಅನೇಕ ಬಾರಿ ಭಯೋತ್ಪಾದಕರು ಹಲ್ಲೆ ನಡೆಸಲು ಯತ್ನಿಸಿದ್ದು, ಹಾಗಾಗಿ ಇದು ಕೂಡಾ ಭಯೋತ್ಪಾದಕರ ಕೃತ್ಯ ಎಂದು ಶಂಕಿಸಲಾಗಿದೆ.