ನವದೆಹಲಿ, ಅ. 16 (DaijiworldNews/MB) : ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಬೆಳಕಿಗೆ ಬರುತ್ತಿರುವ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಯುಪಿಯಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲದಿರುವುದು ನಮ್ಮನ್ನು ವಿಚಲಿತರನ್ನಾಗಿಸುತ್ತದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಕಳೆದ ಒಂದು ವಾರದಲ್ಲಿ ಯುಪಿಯಲ್ಲಿ 13 ಭಯಾನಕ ಅಪರಾಧ ಘಟನೆಗಳು ನಡೆದಿವೆ. ವರದಿಗಳ ಪ್ರಕಾರ ಈ ಪೈಕಿ 4 ಘಟನೆಗಳಲ್ಲಿ ಸಂತ್ರಸ್ತರನ್ನು ಹತ್ಯೆ ಮಾಡಲಾಗಿದೆ ಅಥವಾ ಸಂತ್ರಸ್ತರೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ'' ಎಂದು ತಿಳಿಸಿದ್ದು, ''ಯುಪಿಯಲ್ಲಿ ಮಹಿಳೆಯರಿಗೆ ಭದ್ರತೆ ಇಲ್ಲದಿರುವುದು ನಮ್ಮನ್ನು ವಿಚಲಿತರನ್ನಾಗಿಸುತ್ತದೆ. ಸಿಎಂ ಸಾಹೇಬರಿಗೆ ಈ ವಿಚಾರವಾಗಿ ವಿಶೇಷ ಅಧಿವೇಶನ ನಡೆಸಲು ಸಮಯವಿಲ್ಲ. ಯಾಕೆಂದರೆ ಅವರ ಫೋಟೊಸೆಷನ್ ನಡೆಯುತ್ತಿದೆ'' ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಿದ್ದಾರೆ.
ಈ ಹಿಂದೆ ಅವರು ಕಾನೂನು ಸುವ್ಯವಸ್ಥೆ ಕುರಿತಾಗಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷದ ಉತ್ತರ ಪ್ರದೇಶ ರಾಜ್ಯದ ಉಸ್ತುವಾರಿ ವಹಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯು ಆಗಿರುವ ಅವರು ಹತ್ರಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣ ನಡೆದಾಗಿನಿಂದಲೂ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಲ್ಲೇ ಇದ್ದಾರೆ.