ನವದೆಹಲಿ, ಅ. 16 (DaijiworldNews/MB) : ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸಿನ ಕುರಿತು ಅಧ್ಯಯನ ನಡೆಸಲು ರಚನೆ ಮಾಡಲಾಗಿರುವ ಸಮಿತಿಯಿಂದ ವರದಿ ಬಂದ ಬಳಿಕ ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸಿನ ಪರಿಷ್ಕರಣೆ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ)ಯ 75 ನೇ ವಾರ್ಷಿಕೋತ್ಸವದ ಸ್ಮರಣಾರ್ಥ 75 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿದ ನರೇಂದ್ರ ಮೋದಿ ಅವರು, ''ವಿಡಿಯೊ ಕಾನ್ಫೆರೆನ್ಸ್ ಮೂಲಕ ಮಾತನಾಡಿ, ಹೆಣ್ಣು ಮಕ್ಕಳ ವಿವಾಹವಾಗಲು ವಯಸ್ಸು ಎಷ್ಟಿರಬೇಕು ಎಂಬ ಬಗ್ಗೆ ತೀರ್ಮಾನಿಸಲು ಚರ್ಚೆ ನಡೆಯುತ್ತಿದೆ. ಸಮಿತಿ ರಚಿಸಲಾಗಿದ್ದು ಇದರ ವರದಿ ಬಗ್ಗೆ ಹೆಣ್ಣುಮಕ್ಕಳು ಪತ್ರ ಬರೆದು ಮಾಹಿತಿ ಕೇಳುತ್ತಿದ್ದಾರೆ. ಸಮಿತಿ ವರದಿ ಬಂದ ಕೂಡಲೇ ತೀರ್ಮಾನ ಕೈಗೊಳ್ಳಲಾಗುವುದು'' ಎಂದು ಹೇಳಿದ್ದಾರೆ.
''ಕಳೆದ ಆರು ವರ್ಷಗಳಲ್ಲಿ ಸರ್ಕಾರದ ತೆಗೆದುಕೊಂಡ ಮಹತ್ವದ ತೀರ್ಮಾನದಿಂದಾಗಿ ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದಾರೆ. ದೇಶದಲ್ಲಿ ಮೊದಲ ಬಾರಿಗೆ ಬಾಲಕರಿಗಿಂತ ಅಧಿಕ ಬಾಲಕಿಯರು ಅಧಿಕವಾಗಿದ್ದಾರೆ'' ಎಂದು ತಿಳಿಸಿದ್ದಾರೆ.
ಪ್ರಸ್ತುತ, ಮದುವೆಯ ಕನಿಷ್ಠ ವಯಸ್ಸು ಹೆಣ್ಣುಮಕ್ಕಳಿಗೆ 18 ವರ್ಷ ಆಗಿದ್ದರೆ, ಪುರುಷರಿಗೆ 21 ವರ್ಷ ಆಗಿದ್ದು ಹೆಣ್ಣುಮಕ್ಕಳ ವಿವಾಹದ ಕನಿಷ್ಠ ವಯಸ್ಸು ಪರಿಷ್ಕರಣೆ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಈ ಹಿಂದೆ ಮೋದಿ ತಿಳಿಸಿದ್ದರು.