ಬೆಂಗಳೂರು, ಅ. 16 (DaijiworldNews/MB) : ಪ್ರವಾಹ ಪೀಡಿತ 12 ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ಶುಕ್ರವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ವೀಡಿಯೋ ಸಂವಾದ ನಡೆಸಿ ಪ್ರವಾಹ ಸಂತ್ರಸ್ತರ ನೋವಿಗೆ ಕೂಡಲೇ ಸ್ಪಂದಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜ್ಯದ ಪ್ರವಾಹ ಪೀಡಿತ ಜಿಲ್ಲೆಗಳಿಗೆ ರೂ. 85.49 ಕೋಟಿ ರೂ.ಗಳನ್ನು ತುರ್ತು ಪರಿಹಾರಕ್ಕಾಗಿ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಜಿಲ್ಲಾಡಳಿತಗಳಿಗೆ ರಕ್ಷಣಾ ಕಾರ್ಯಗಳಿಗೆ ಅಗತ್ಯವಿರುವ ಸಂಪನ್ಮೂಲಗಳನ್ನು ಒದಗಿಸಲಾಗಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಅಕ್ಟೋಬರ್ 10ರಿಂದ 15ರವರೆಗೆ ಕಲಬುರಗಿ, ಬೀದರ್, ಯಾದಗಿರಿ, ಬಳ್ಳಾರಿ, ರಾಯಚೂರು, ಬಾಗಲಕೋಟೆ, ದಾವಣಗೆರೆ, ಕೊಪ್ಪಳ, ದಕ್ಷಿಣ ಕನ್ನಡ, ಶಿವಮೊಗ್ಗ, ಉಡುಪಿ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿ ಕೆಲವೆಡೆ ಪ್ರವಾಹ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಪ್ರವಾಹಕ್ಕೆ ತುತ್ತಾಗಬಹುದಾದ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿ. ಸಂತ್ರಸ್ತರಿಗೆ ಉತ್ತಮ ಆಹಾರ ಪೂರೈಸಬೇಕು. ಈ ವಿಚಾರಕ್ಕೆ ಸಂಬಂಧಿಸಿ ಯಾವ ದೂರುಗಳು ಬರಬಾರದಂತೆ ನೋಡಿಕೊಳ್ಳಿ. ಜಾನವಾರುಗಳನ್ನು ಕೂಡಾ ರಕ್ಷಿಸಿ ಆಹಾರ ಪೂರೈಸಿ ಎಂದು ತಿಳಿಸಿದ್ದಾರೆ.
ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ ಹಾಗೂ ಬಳ್ಳಾರಿ ಜಿಲ್ಲೆಗಳಿಂದ 14 ದೋಣಿಗಳನ್ನು ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕಳುಹಿಸಲಾಗಿದೆ. ನೆರೆ ಸಂತ್ರಸ್ತರ ರಕ್ಷಣೆಗಾಗಿ ರಕ್ಷಣಾ ಹೆಲಿಕಾಫ್ಟರ್ಗಳನ್ನು ಕಳುಹಿಸಲಾಗಿದೆ ಎಂದು ಹೇಳಿದರು.
ಈ ವೇಳೆಯೇ ಪ್ರವಾಹದಿಂದ ಬೆಳೆ ಹಾನಿಯಾದ 51,810 ಸಂತ್ರಸ್ತ ರೈತರ ಬ್ಯಾಂಕ್ ಖಾತೆಗೆ 36.57 ಕೋಟಿ ರೂ.ಗಳ ಇನ್ ಪುಟ್ ಸಬ್ಸಿಡಿಯನ್ನು ನೇರವಾಗಿ ಆನ್ಲೈನ್ ಮೂಲಕ ಜಮೆ ಮಾಡಿದರು.
ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ: ಇ.ವಿ.ರಮಣರೆಡ್ಡಿ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.