ಲಖನೌ, ಅ. 16 (DaijiworldNews/MB) : ತಮ್ಮ ಸಹಾಯಕ ಮಾಡಿದ ಹತ್ಯೆಯನ್ನು ಸಮರ್ಥಿಸಿಕೊಳ್ಳಲು ಮುಂದಾದ ಬಿಜೆಪಿ ಶಾಸಕರೊಬ್ಬರು ಭೌತವಿಜ್ಞಾನಿ ಐಸಾಕ್ ನ್ಯೂಟನ್ ಅವರ ಮೂರನೇ ನಿಯಮವನ್ನು ಉಲ್ಲೇಖಿಸಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ. ನ್ಯೂಟನ್ನ ಚಲನೆಯ ಮೂರನೇ ನಿಯಮದ ಪ್ರಕಾರವಾಗಿ ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂಬುದನ್ನು ಉಲ್ಲೇಖ ಮಾಡಿರುವ ಬಿಜೆಪಿ ಶಾಸಕರಾದ ಸುರೇಂದ್ರ ಸಿಂಗ್ ಅವರು ತಮ್ಮ ಸಹಾಯಕ ಮಾಡಿದ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನ್ಯಾಯಬೆಲೆ ಅಂಗಡಿಗಳ ಹಂಚಿಕೆಯ ಬಗ್ಗೆ ಬಲ್ಲಿಯಾ ಜಿಲ್ಲೆಯ ದುರ್ಜನ್ಪುರ ಗ್ರಾಮದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆದಿದ್ದು ಈ ಸಭೆಯಲ್ಲಿ ವಾಗ್ವಾದ ನಡೆದ ಸಂದರ್ಭ ಶಾಸಕರ ಸಹಾಯಕ ಧೀರೇಂದ್ರ ಸಿಂಗ್, ತನ್ನ ಪ್ರತಿಸ್ಪರ್ಧಿ ಜೈಪ್ರಕಾಶ್ ಪಾಲ್ ಎಂಬವರ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದರು.
ಈ ಹತ್ಯೆಯನ್ನು ಸಮರ್ಥಿಸಿಕೊಂಡಿರುವ ಶಾಸಕರು ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಧೀರೇಂದ್ರ ತನ್ನ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾನೆ. ಯಾರಾದರೂ ಒಬ್ಬರಿಗೆ ಹೊಡೆದರೆ, ಅವರು ತಿರುಗಿ ಹೊಡೆಯುವುದು ಸಹಜ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಸಿಕ್ಕೇ ಸಿಗುತ್ತದೆ ಎಂದು ನನ್ನ ನಂಬಿಕೆ ಎಂದು ಹೇಳಿದ್ದಾರೆ.
ಇನ್ನು ಹತ್ಯೆಗೀಡಾದ ಜೈಪ್ರಕಾಶ್ ಕುಟುಂಬದ ಸದಸ್ಯರು, ಶಾಸಕ ಸುರೇಂದ್ರ ಸಿಂಗ್ನ ಪ್ರೋತ್ಸಾಹದಿಂದಲೇ ಧೀರೇಂದ್ರ ಹತ್ಯೆ ಮಾಡುವ ಮಟ್ಟಿಗೆ ಇಳಿದಿದ್ದಾನೆ. ಅದಕ್ಕಾಗಿ ಪೊಲೀಸರು ಆರೋಪಿ ಪರಾರಿಯಾಗಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.