ಬೆಂಗಳೂರು, ಅ. 17 (DaijiworldNews/MB) : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ವಿಚಾರಣೆಗೆ ಪ್ರಮುಖ ಆರೋಪಿಯಾಗಿರುವ ಆದಿತ್ಯ ಆಳ್ವನ ಸಹೋದರಿ ಹಾಗೂ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾ ಆಳ್ವ ಶುಕ್ರವಾರ ವಿಚಾರಣೆಗೆ ಹಾಜರಾಗಿಲ್ಲ ಎಂದು ವರದಿ ತಿಳಿಸಿದೆ.
ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾ ಆಳ್ವ ಅವರು ತಮ್ಮ ಸಹೋದರ ಆದಿತ್ಯ ಆಳ್ವನಿಗೆ ಆಶ್ರಯ ನೀಡಿದ ಆರೋಪದಲ್ಲಿ ಗುರುವಾರ ಸಿಸಿಬಿ ಪೊಲೀಸರು ಮುಂಬೈನ ಜುಹು ಪ್ರದೇಶದಲ್ಲಿರುವ ಒಬೆರಾಯ್ ದಂಪತಿಯ ಮನೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಿಯಾಂಕಾ ನೋಟಿಸ್ ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ಹೇಳಲಾಗಿದ್ದು ಈ ಹಿನ್ನೆಲೆ ಸಿಸಿಬಿ ಅಧಿಕಾರಿಗಳು ವಾಟ್ಸ್ಆಪ್ ಮೂಲಕ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ. ಆದರೂ ಕೂಡಾ ಪ್ರಿಯಾಂಕಾ ಅವರು ವಿಚಾರಣೆಗೆ ಗೈರಾಗಿದ್ದಾರೆ ಎಂದು ವರದಿ ತಿಳಿಸಿದೆ.