ನವದೆಹಲಿ, ಅ. 17 (DaijiworldNews/MB) : ಕೇಂದ್ರ ಸರ್ಕಾರವು ಜಿಎಸ್ಟಿ ಪರಿಹಾರ ಮೊತ್ತ ಭರ್ತಿಗೆ ರಾಜ್ಯಗಳ ಪರವಾಗಿ ತಾನೇ ಸಾಲ ಮಾಡುವುದಾಗಿ ಹೇಳಿದ್ದು ಇದರ ಮರು ದಿನವೇ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಗಳಿಗೆ ಈ ಕುರಿತಾಗಿ ಪತ್ರ ಬರೆದಿದ್ದಾರೆ ಎಂದು ವರದಿ ತಿಳಿಸಿದೆ.
"ಅನೇಕ ರಾಜ್ಯಗಳ ಸಲಹೆಯ ಆಧಾರದ ಮೇಲೆ, ಕೇಂದ್ರ ಸರ್ಕಾರವು ಆರಂಭದಲ್ಲಿ ಈ ಸಾಲವನ್ನು ಪಡೆದು ನಂತರ ಅದನ್ನು ಸಾಲವಾಗಿ ರಾಜ್ಯಗಳಿಗೆ ನೀಡಲಾಗಿತ್ತುದೆ ಎಂದು ನಿರ್ಧರಿಸಲಾಗಿದೆ. ಇದರಿಂದಾಗಿ ಸಾಲ ಪಡೆಯುವುದು ಸರಳವಾಗುತ್ತದೆ ಮತ್ತು ಅನುಕೂಲಕರ ಬಡ್ಡಿದರವನ್ನು ಖಾತರಿಪಡಿಸುತ್ತದೆ. ಜಿಎಸ್ಟಿ ಪರಿಹಾರ ಮೊತ್ತವನ್ನು ನೀಡಲು ಸಂಗ್ರಹಿಸುತ್ತಿದ್ದ ಸೆಸ್ನಿಂದಲೇ, ಸಾಲದ ಅಸಲು ಮತ್ತು ಬಡ್ಡಿಯನ್ನು ತೀರಿಸಲಾಗುತ್ತದೆ ಎಂದು ಪತ್ರದಲ್ಲಿ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ಸ್ವಾಗತಿಸಿದ್ದು ಮೊದಲ ಹೆಜ್ಜೆ, ಸರಿಯಾದ ಹೆಜ್ಜೆ ಎಂದು ಹೇಳಿದ್ದಾರೆ.