ನವದೆಹಲಿ, ಅ. 17 (DaijiworldNews/MB) : ದೇಶದಲ್ಲಿ ನವರಾತ್ರಿ ಸಂಭ್ರಮ ಶನಿವಾರದಿಂದ ಆರಂಭಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಶುಭಾಶಯ ತಿಳಿಸಿದ್ದಾರೆ.
ಶುಭಾಶಯ ತಿಳಿಸಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ''ಎಲ್ಲರಿಗೂ ನವರಾತ್ರಿಯ ಶುಭ ಹಬ್ಬದ ಶುಭಾಶಯಗಳು. ಜಗತ್ ಜನನಿ ತಾಯಿ ಜಗದಂಬಾ, ನಿಮ್ಮೆಲ್ಲರಿಗೂ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತಂದುಕೊಡಲಿ. ಜೈ ಮಾತಾ'' ಎಂದಿದ್ದಾರೆ.
ಹಾಗೆಯೇ ''ನವರಾತ್ರಿಯ 1 ನೇ ದಿನದಂದು ತಾಯಿ ಶೈಲಪುತ್ರಿಗೆ ಪ್ರಣಾಮಗಳು. ತಾಯಿ ಶೈಲಪುತ್ರಿಯ ಆಶೀರ್ವಾದದಿಂದ, ನಮ್ಮ ಗ್ರಹವು ಸುರಕ್ಷಿತ, ಆರೋಗ್ಯಕರ ಮತ್ತು ಸಮೃದ್ಧವಾಗಿರಲಿ. ತಾಯಿ ಶೈಲಪುತ್ರಿಯ ಆಶೀರ್ವಾದವು ಬಡ ಮತ್ತು ದೀನ ದಲಿತರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ನಮಗೆ ಶಕ್ತಿಯನ್ನು ನೀಡಲಿ'' ಎಂದು ಹಾರೈಸಿದ್ದಾರೆ.
ಇನ್ನು ನಾಡ ಹಬ್ಬ ದಸರಾ ಶುಭಾಶಯ ತಿಳಿಸಿ ಟ್ವೀಟ್ ಮಾಡಿರುವ ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು, ''ನಾಡಿನ ಸಮಸ್ತ ಜನತೆಗೆ ನಾಡಹಬ್ಬ ದಸರಾ ಮತ್ತು ನವರಾತ್ರಿಯ ಹಾರ್ದಿಕ ಶುಭಾಶಯಗಳು. ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಸಂತೋಷ, ನೆಮ್ಮದಿ, ಆರೋಗ್ಯಗಳನ್ನು ಕರುಣಿಸಲಿ, ಕೊರೋನಾ, ನೆರೆ ಸಂಕಷ್ಟಗಳು ಕಳೆದು ನಾಡು ಸಮೃದ್ಧವಾಗಿರುವಂತೆ ತಾಯಿ ಅನುಗ್ರಹಿಸಲಿ. ಎಲ್ಲರೂ ಸುರಕ್ಷಿತವಾಗಿ ಹಬ್ಬವನ್ನು ಆಚರಿಸೋಣ, ನಾಡಿನ ಒಳಿತಿಗಾಗಿ ಪ್ರಾರ್ಥಿಸೋಣ'' ಎಂದಿದ್ದಾರೆ.
''ನಾಡಿನ ಸಮಸ್ತ ಜನತೆಗೆ ನವರಾತ್ರಿ ಹಬ್ಬದ ಶುಭಾಶಯಗಳು. ವಿಜಯದಶಮಿಯ ಆರಂಭ ಎಲ್ಲರಿಗೂ ಒಳಿತು ಮಾಡಲಿ. ಸಕಲ ಸಂಕಷ್ಟಗಳು ದೂರಾಗಿ ಶಾಂತಿ, ನೆಮ್ಮದಿ ನೆಲೆಸಲಿ. ನಾಡು ಸುಭೀಕ್ಷವಾಗಿ ಸಮೃದ್ದಿಯಾಗಿರಲಿ ಎಂದು ನಾಡದೇವತೆ ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ಸರ್ವೇ ಜನಾಃ ಸುಖಿನೋ ಭವಂತು'' ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾರೈಸಿದ್ದಾರೆ.
ಗೃಹ ಸಚಿವ ಅಮಿತ್ ಶಾ ಅವರು ಟ್ವೀಟ್ ಮಾಡಿ, ''ನವರಾತ್ರಿಯು ತಪಸ್ಸು, ಪೂಜೆ ಮತ್ತು ಶಕ್ತಿಯ ಆರಾಧನೆಯ ಸಂಕೇತವಾಗಿದೆ. ನವರಾತ್ರಿಯ ಮಹಾಪರ್ವದ ಆರಂಭದಲ್ಲಿ ಎಲ್ಲಾ ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳು. ಭಗವತಿ ದೇವಿಯು ಆಶೀರ್ವಾದಿಸಿ ಕಾಪಾಡಲಿ ಜೈ ಮಾತಾ'' ಎಂದಿದ್ದಾರೆ.