ನವದೆಹಲಿ, ಅ. 17 (DaijiworldNews/MB) : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಕೆಲವು ವಿಶೇಷ 'ಸ್ನೇಹಿತರ' ಜೇಬುಗಳನ್ನು ತುಂಬುತ್ತಿದೆ ಎಂದು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ.
ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸುತ್ತಲ್ಲೇ ಇರುವ ರಾಹುಲ್ ಗಾಂಧಿಯವರು ಟ್ವೀಟ್ ಮಾಡಿ ಜಾಗತಿಕ ಹಸಿವು ಸೂಚ್ಯಂಕದ ಬಗ್ಗೆ ಉಲ್ಲೇಖ ಮಾಡಿದ್ದು ಇದರಲ್ಲಿ 107 ದೇಶಗಳ ಪೈಕಿ ಭಾರತ ಕೊನೆಯಿಂದ 94ನೇ ಸ್ಥಾನ ಪಡೆದಿದೆ. ಇಂಡೋನೇಷಿಯಾ, ನೇಪಾಳ, ಬಾಂಗ್ಲಾದೇಶ, ಪಾಕಿಸ್ತಾನ ಭಾರತಕ್ಕಿಂತ ಉತ್ತಮವಾಗಿದೆ.
ಈ ಜಾಗತಿಕ ಹಸಿವು ಸೂಚ್ಯಂಕಕ್ಕೆ ಸಂಬಂಧಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು ಭಾರತದ ಬಡವರು ಹಸಿದಿದ್ದಾರೆ. ಯಾಕೆಂದರೆ ಸರ್ಕಾರವು ತನ್ನ ಕೆಲವು ವಿಶೇಷ 'ಸ್ನೇಹಿತರ' ಜೇಬುಗಳನ್ನು ತುಂಬುತ್ತಿದೆ ಎಂದು ಸರ್ಕಾರವನ್ನು ಟೀಕಿಸಿದ್ದಾರೆ.
ಈ ಜಾಗತಿಕ ಹಸಿವು ಸೂಚ್ಯಂಕದ ಪ್ರಕಾರವಾಗಿ ಇಂಡೋನೇಷಿಯಾ 70 ನೇ ರ್ಯಾಂಕ್, ನೇಪಾಳ 73 ನೇ ರ್ಯಾಂಕ್, ಬಾಂಗ್ಲಾದೇಶ 75 ರ್ಯಾಂಕ್, ಪಾಕಿಸ್ತಾನ 88 ನೇ ರ್ಯಾಂಕ್ನಲ್ಲಿದ್ದರೆ ಭಾರತವು 94 ನೇ ರ್ಯಾಂಕ್ನಲ್ಲಿದೆ. ಇದನ್ನು ಹೊರತುಪಡಿಸಿ ಲಿಬಿಯಾ ಮೊದಲಾದ ದೇಶಗಳ ಹಸಿವು ಸೂಚ್ಯಂಕ ಭಾರತಕ್ಕಿಂತ ದುಸ್ಥರವಾಗಿದೆ.