ನವದೆಹಲಿ, ಅ. 17 (DaijiworldNews/MB) : ಭಾರತದಲ್ಲಿಆಹಾರ ಪದಾರ್ಥಗಳ ಉತ್ಪಾದನೆ ಬೇಡಿಕೆಗಿಂತಲೂ ಅಧಿಕವಾಗಿದೆ ಎಂಬ ಸರ್ಕಾರದ ಹೇಳಿಕೆಯ ನಡುವೆ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ದೇಶದಲ್ಲಿ ಗಣನೀಯವಾಗಿ ಅಧಿಕವಾಗಿರುವ ಅಂಶ ಬೆಳಕಿಗೆ ಬಂದಿದೆ. ವಿಶ್ವದ ವಿವಿಧ ದೇಶಗಳಲ್ಲಿ ಜನರಿಗೆ ಆಹಾರ ಮತ್ತು ಪೌಷ್ಟಕತೆ ಲಭ್ಯತೆಯನ್ನು ಅಳೆಯುವ 'ಜಾಗತಿಕ ಹಸಿವಿನ ಸೂಚ್ಯಂಕ'ದಲ್ಲಿ ಭಾರತದ ಶ್ರೇಯಾಂಕ ಗಣನೀಯವಾಗಿ ಕುಸಿದಿದೆ. ಆದರೆ ಭಾರತವು ನೇಪಾಳ, ಬಾಂಗ್ಲಾ, ಪಾಕಿಸ್ತಾನಕ್ಕಿಂತಲೂ ಕೆಳಸ್ಥಾನದಲ್ಲಿದೆ.
ವಿಶ್ವದಾದ್ಯಂತ ಹಸಿವಿನ ಮಟ್ಟ ಮತ್ತು ಅಪೌಷ್ಟಿಕತೆ ಲೆಕ್ಕಹಾಕುವ ಸೂಚ್ಯಂಕವು ಶುಕ್ರವಾರ ಬಿಡುಗಡಯಾಗಿದ್ದು 107 ದೇಶಗಳ ಪೈಕಿ ಭಾರತ ಕೊನೆಯಿಂದ 94ನೇ ಸ್ಥಾನ ಪಡೆದಿದೆ. ಆದರೆ ನೇಪಾಳ, ಬಾಂಗ್ಲಾ, ಪಾಕಿಸ್ತಾನದ ಸ್ಥಾನವು ಭಾರತಕ್ಕಿಂತ ಉತ್ತಮವಾಗಿದೆ. ಇಂಡೋನೇಷಿಯಾ 70 ನೇ ರ್ಯಾಂಕ್, ನೇಪಾಳ 73 ನೇ ರ್ಯಾಂಕ್, ಬಾಂಗ್ಲಾದೇಶ 75 ರ್ಯಾಂಕ್, ಪಾಕಿಸ್ತಾನ 88 ನೇ ರ್ಯಾಂಕ್ನಲ್ಲಿದ್ದರೆ ಭಾರತವು 94 ನೇ ಸ್ಥಾನದಲ್ಲಿದೆ.
ಇನ್ನು ವೆಲ್ತುಂಗರ್ಹಿಲ್ಫ್ ಮತ್ತು ಕನ್ಸರ್ನ್ ವರ್ಲ್ಡ್ ವೈಡ್ ಜಂಟಿಯಾಗಿ ಬಿಡುಗಡೆ ಮಾಡಿರುವ ಈ ವರದಿಯ ಪ್ರಕಾರವಾಗಿ ಭಾರತದಲ್ಲಿ ಹಸಿವಿನ ಮಟ್ಟ 27.2 ರೊಂದಿಗೆ ಗಂಭೀರವಾಗಿದೆ. ಈ ಹಿನ್ನೆಲೆಯಲ್ಲಿ ವಿಪಕ್ಷಗಳು ಹಾಗೂ ಆಹಾರ ಭದ್ರತೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೋರಾಟಗಾರರು ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು ಸರ್ಕಾರ ಹಸಿವಿನ ಮಟ್ಟವನ್ನು ನಿಭಾಯಿಸುವಲ್ಲಿ ವಿಫಲವಾಗಿದೆ ಎಂದು ದೂರಿದ್ದಾರೆ.