ಮುಂಬೈ, ಅ. 17 (DaijiworldNews/MB) : ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ಯತ್ನ ಆರೋಪದಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಸಹೋದರಿ ರಂಗೋಲಿ ಚಾಂಡೆಲ್ ವಿರುದ್ಧ ಎಫ್ಐಆರ್ ದಾಖಲು ಮಾಡಲು ಮುಂಬೈ ನ್ಯಾಯಾಲಯವೊಂದು ಶನಿವಾರ ಆದೇಶಿಸಿದೆ.
ಸಹೋದರಿಯರಿಬ್ಬರೂ ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಮೂಲಕ ಕೋಮು ದ್ವೇಷ ಮತ್ತು ಸುಳ್ಳುಗಳನ್ನು ಹರಡಿದ್ದಾರೆ ಎಂದು ಆರೋಪಿಸಲಾಗಿದೆ.
ಬಾಂದ್ರಾ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬಾಲಿವುಡ್ ಕಾಸ್ಟಿಂಗ್ ನಿರ್ದೇಶಕ ಮುನಾವ್ವರ್ ಅಲಿ ಅಲಿಯಾಸ್ ಸಾಹಿಲ್ ಸಯ್ಯದ್ ಅವರ ಪರ ವಕೀಲಕ ವಾದವನ್ನು ಆಲಿಸಿದ ಬಳಿಕ ನ್ಯಾಯಾಲಯವು ಈ ಆದೇಶವನ್ನು ನೀಡಿದೆ.
ಈ ದೂರಿಗೆ ಸಂಬಂಧಿಸಿ ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳು ಅರಿವಿದ್ದು ಅಪರಾಧವನ್ನು ಮಾಡಿದ್ದಾರೆಂದು ಎಂದು ತಿಳಿದು ಬಂದಿದೆ ಎಂದು ನ್ಯಾಯಾಲಯವು ತಿಳಿಸಿದೆ.
"ಆರೋಪಿಗಳು ಟ್ವಿಟ್ಟರ್ ನಂತಹ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡು ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವ ಯತ್ನ ಮಾಡಿದ್ದಾರೆ ಎಂದು ನ್ಯಾಯಾಲಯವು ಹೇಳಿದೆ.
ಕಂಗನಾ ಬಾಲಿವುಡ್ ಅನ್ನು ದೂಷಿಸಿದ್ದಾರೆ, ಅದರಲ್ಲಿ ಕೆಲಸ ಮಾಡುವ ಜನರನ್ನು ಸ್ವಜನಪಕ್ಷಪಾತ, ಮಾದಕ ವ್ಯಸನ, ಕೋಮು ಪಕ್ಷಪಾತ ಮಾಡಿ ವಿವಿಧ ಸಮುದಾಯಗಳ ಕಲಾವಿದರ ನಡುವೆ ಬಿರುಕು ಸೃಷ್ಟಿಸಲು ಪ್ರಯತ್ನಿಸುವುದು, ಧರ್ಮಗಳನ್ನು ಅವಮಾನಿಸುವ ಕೃತ್ಯವನ್ನು ಸಾರ್ವಜನಿಕ ಹೇಳಿಕೆಗಳ ಮೂಲಕ ಎಸಗಿದ್ದಾರೆ ಎಂದು ಸಾಹಿಲ್ ಸಯ್ಯದ್ ಅವರು ಆರೋಪಿಸಿದ್ದಾರೆ.