ಚಿತ್ರದುರ್ಗ, ಅ. 17 (DaijiworldNews/MB) : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಅನುಕಂಪದ ಗಿಮಿಕ್ ಉಪಚುನಾವಣೆಯಲ್ಲಿ ನಡೆಯಲ್ಲ ಎಂದು ಸಚಿವ ಬಿ.ಶ್ರೀರಾಮುಲು ಅವರು ಹೇಳಿದರು.
ಈ ಬಗ್ಗೆ ಹಿರಿಯೂರಿನಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಚಿದಾನಂದ ಗೌಡ ಪರ ಮತಯಾಚನೆ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡಿಕೆಶಿ ಅವರು ಅನುಕಂಪ ಸೃಷ್ಟಿ ಮಾಡಿ ಗೆಲ್ಲುವ ಯತ್ನಕ್ಕೆ ಮುಂದಾಗಿದ್ದಾರೆ. ಆದರೆ ಅದು ವಿಫಲವಾಗುತ್ತದೆ ಎಂದು ಹೇಳಿದ ಅವರು, ವಿಧಾನ ಪರಿಷತ್ ಹಾಗೂ ವಿಧಾನಸಭೆ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ಭರವಷೆ ವ್ಯಕ್ತಪಡಿಸಿದರು.
ನಾವು ಯಾವುದೇ ಸೇಡಿನ ರಾಜಕೀಯ ನಡೆಸುತ್ತಿಲ್ಲ. ನೀತಿ ಸಂಹಿತೆ ವಿಚಾರವಾಗಿ ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಿದೆ. ಡಿಕೆಶಿಯವರು ಸೋಲುವ ಬೇಸರದಿಂದ ಬಿಜೆಪಿಯ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆಗ್ನೇಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಸ್ಪರ್ಧೆ ಕುರಿತು ಪಕ್ಷದ ವರಿಷ್ಟರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.