ಬೆಂಗಳೂರು,ಅ. 17 (DaijiworldNews/HR): ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದ ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಿಲ್ಲ. ಅವರ ಆಟ ಇಲ್ಲಿ ನಡೆಯಲ್ಲ. ಆರ್ ಆರ್ ನಗರದಲ್ಲಿ ಬಿಜೆಪಿ ಗೆದ್ದೇಗೆಲ್ಲುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗಿಂತ ಬಿಜೆಪಿ ಅಭ್ಯರ್ಥಿ ಹೆಚ್ಚು ಸಮರ್ಥರಿದ್ದು, ಆಡಳಿತ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದರಿಂದ ಕ್ಷೇತ್ರಕ್ಕೆ ಒಳ್ಳೆಯದಾಗುತ್ತದೆ. ಬೆಂಗಳೂರು, ನಾಡಪ್ರಭು ಕೆಂಪೇಗೌಡರು ಕಟ್ಟಿದ ಮಹಾನಗರವಾಗಿದ್ದು, ಮುನಿರತ್ನ ಮುಂದಿನ ದಿನಗಳಲ್ಲಿ ನಾಡಪ್ರಭುಗಳ ಪ್ರೇರಣೆಯೊಂದಿಗೆ, ಅವರ ಕನಸು-ದೂರದೃಷ್ಟಿಗೆ ಯಾವುದೇ ಮುಕ್ಕಾಗದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲಿದ್ದಾರೆ ಎಂದರು.
ಇನ್ನು ಮುನಿರತ್ನ ಅವರು ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಕೆಲಸ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆ, ಸಾರ್ವಜನಿಕ ಸಾರಿಗೆ, ರಸ್ತೆ, ಕುಡಿಯುವ ನೀರು, ಉದ್ಯಾನವನಗಳ ನಿರ್ವಹಣೆ ಸೇರಿ ಎಲ್ಲ ರಂಗಗಳಲ್ಲಿಯೂ ಅವರ ನೇತೃತ್ವದಲ್ಲಿ ಕ್ಷೇತ್ರವೂ ಉತ್ತಮ ಪ್ರಗತಿ ಎಂದು ಹೇಳಿದ್ದಾರೆ.