ಹೊಸದಿಲ್ಲಿ,ಅ.18 (DaijiworldNews/HR): ಕೊರೊನಾ ಲಸಿಕೆಯು ದೇಶದ ಪ್ರತಿಯೊಬ್ಬರಿಗೂ ಅತ್ಯಂತ ತ್ವರಿತಗತಿಯಲ್ಲಿ ಸಿಗಬೇಕು. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿದಂತೆ ಲಸಿಕೆಯನ್ನೂ ವಿತರಣೆ ಮಾಡಬೇಕು ಎಂದು ಪ್ರಧಾನಿ ಮೋದಿ ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ.
ದೇಶದಲ್ಲಿನ ಕೊರೊನಾ ಸ್ಥಿತಿಗತಿ ಬಗ್ಗೆ ಉನ್ನತ ಮಟ್ಟದ ಸಭೆ ನಡೆಸಿದ ಮೋದಿ, ಲಸಿಕೆ ಸಿದ್ಧವಾದ ಮೇಲೆ ದೇಶದ ಪ್ರತಿಯೊಬ್ಬರಿಗೆ ಹೇಗೆ ತಲುಪಬೇಕು ಎಂಬುದರ ಕುರಿತು ಚರ್ಚಿಸಿದರು. ಈ ಸಭೆಯಲ್ಲಿ ಲಸಿಕೆ ಆಡಳಿತದ ಕುರಿತಾದ ರಾಷ್ಟ್ರೀಯ ತಜ್ಞರ ಗುಂಪು ವಿವರವಾದ ಮಾಹಿತಿ ನೀಡಿತು.
ಇನ್ನು ಭಾರತದ ಎಲ್ಲ ಸರಕಾರಗಳು, ನಾಗರಿಕ ಸಂಸ್ಥೆಗಳನ್ನು ಸೇರಿಸಿಕೊಂಡು ಯಶಸ್ವಿ ಚುನಾವಣೆಯನ್ನು ನಡೆಸುತ್ತೇವೆ. ಅದೇ ರೀತಿಯಾಗಿ ಪ್ರತಿಯೊಬ್ಬರನ್ನು ಇದರಲ್ಲಿ ಒಳಗೊಳ್ಳುವಂತೆ ಮಾಡಿ, ತ್ವರಿತವಾಗಿ ಎಲ್ಲರಿಗೂ ಲಸಿಕೆ ಸಿಗುವಂತೆ ಮಾಡಬೇಕು ಎಂದು ಎಂದರು.
2021ರ ಮಾರ್ಚ್ ವೇಳೆಗೆ ಲಸಿಕೆ ಲಭ್ಯವಾಗುವ ಸಾಧ್ಯತೆ ಇದ್ದು, 2020ರ ವರ್ಷಾಂತ್ಯದ ವೇಳೆಗೆ 200ರಿಂದ 300 ದಶಲಕ್ಷ ಲಸಿಕೆ ಡೋಸ್ಗಳು ಸಿದ್ಧವಾಗಲಿವೆ ಎಂಬುದಾಗಿ ಕೊರೊನಾ ಲಸಿಕೆಯ ಪ್ರಮುಖ ಜವಾಬ್ದಾರಿ ಹೊತ್ತಿರುವ ಸೆರಮ್ ಸಂಸ್ಥೆ ತಿಳಿಸಿದೆ.