ಬೆಂಗಳೂರು, ಅ. 18 (DaijiworldNews/PY): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೋ ಗೋದಾಮಿನ ಸರಕು ವಿಭಾಗದಿಂದ ಸುಮಾರು 2.5 ಕೆ.ಜಿ ಚಿನ್ನ ಕಾಣೆಯಾದ ಘಟನೆ ಬೆಳಕಿಗೆ ಬಂದಿದೆ.
ಸಾಂದರ್ಭಿಕ ಚಿತ್ರ
ಕಳ್ಳ ಸಾಗಣೆಯ ಮೂಲಕ ವಿವಿಧ ದೇಶಕ್ಕೆ ಚಿನ್ನ ಮಾರಾಟ ಮಾಡುವ ಹಲವಾರು ಪ್ರಯತ್ನಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಿಫಲಗೊಳಿಸುತ್ತಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ವಿಮಾನ ನಿಲ್ದಾಣದ ಗೋದಾಮಿನಲ್ಲಿ ಇಡಲಾಗಿತ್ತು. ಕಸ್ಟಮ್ಸ್ ಇಲಾಖೆಯ ಜಂಟಿ ಆಯುಕ್ತ ಎಂ.ಜೆ.ಚೇತನ್ ಅವರು ನೀಡಿದ ದೂರಿನ ಆಧಾರದ ಮೇಲೆ ಐವರು ಕಸ್ಟಮ್ಸ್ ಅಧಿಕಾರಿಗಳ ವಿರುದ್ದ ಈ ಸಂಬಂಧ ಎಫ್ಐಆರ್ ದಾಖಲಿಸಿಲಾಗಿದೆ.
ಜೂನ್ 2012 ಮತ್ತು ಡಿಸೆಂಬರ್ 2014 ರ ನಡುವೆ ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆಯ ಮೂಲಕ ದೇಶಕ್ಕೆ ಚಿನ್ನ ಮಾರಾಟ ಮಾಡುವ ಯತ್ನಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಿಫಲಗೊಳಿಸಿ ವಶಪಡಿಸಿಕೊಂಡ ಚಿನ್ನವನ್ನು ವಿಮಾನ ನಿಲ್ದಾಣದ ಎಂಹೆಚ್ಬಿ ಗೋದಾಮಿನಲ್ಲಿ ಇಡಲಾಗಿತ್ತು. ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ನಡೆಸಿದ ತನಿಖೆಯ ವೇಳೆ 13 ವಿವಿಧ ಪ್ರಕರಣಗಳಡಿಯಲ್ಲಿ ವಶಪಡಿಸಿಕೊಂಡ 2.594 ಕೆಜಿ ಚಿನ್ನವು ಗೋದಾಮಿನಿಂದ ಕಾಣೆಯಾದ ವಿಚಾರ ಬೆಳಕಿಗೆ ಬಂದಿದೆ.
ಗೋದಾಮಿನ ಸುರಕ್ಷತೆ ಹಾಗೂ ಅಧಿಕಾರಿಗಳ ವಿರುದ್ದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಬಿಐ ಗೆ ದೂರು ನೀಡಲಾಗಿದ್ದು. ಅದರಂತೆ ಅ.12ರಂದು ಆರು ಮಂದಿಯ ವಿರುದ್ದ ಎಫ್ಐಆರ್ ದಾಖಲಿಸಲಾಗಿದೆ.
ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ ಇಲಾಖೆಯ ಸಹಾಯಕ ಆಯುಕ್ತ ವಿನೋದ್ ಚಿನ್ನಪ್ಪ ಹಾಗೂ ಕೇಶವ್, ಸೂಪರಿಟೆಂಡೆಂಟ್ ಎನ್. ಜಿ ರವಿಶೇಖರ್, ಡಿನ್ರೆಕ್ಸ್, ಕೆಬಿ ಲಿಂಗರಾಜು ಮತ್ತು ಖಾಸಗಿ ವ್ಯಕ್ತಿ ಎಸ್.ಟಿ ಹಿರೇಮಠ್ ವಿರುದ್ಧ ಎಫ್ಐರ್ ದಾಖಲಾಗಿದೆ.