ಬೆಂಗಳೂರು, ಅ. 18 (DaijiworldNews/PY): ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ದ ದಾಖಲಾಗಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಆರೋಪಿ ಆದಿತ್ಯ ಆಳ್ವ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ಆದರೆ, ಆದಿತ್ಯ ಆಳ್ವ ಪರಾರಿಯಾಗಿದ್ದಾರೆ.
ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠವು ಈ ಅರ್ಜಿಯನ್ನು ಅ.17ರ ಶುಕ್ರವಾರ ಮಂಡಿಸಲಾಯಿತು.
ವಿಚಾರಣೆಯ ಸಂದರ್ಭ, ಸಿಸಿಬಿ ಪರ ವಕೀಲರು, ಆದಿತ್ಯ ಆಳ್ವ ಡ್ರಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಆತ ಇತರ ಆರೋಪಿಗಳಿಗೆ ಡ್ರಗ್ಸ್ ಮಾರಾಟ ಮಾಡಿರುವ ವಿಚಾರದ ಬಗ್ಗೆ ಸಾಕ್ಷ್ಯಗಳು ಲಭ್ಯವಿದೆ. ಅಲ್ಲದೇ, ಆತ ಡ್ರಗ್ಸ್ ಸೇವನೆ ಮಾಡಿರುವ ಬಗ್ಗೆಯೂ ತನಿಖೆಯಯಿಂದ ತಿಳಿದುಬಂದಿದೆ. ಸದ್ಯ ಆದಿತ್ಯ ಆಳ್ವ ಪರಾರಿಯಾಗಿದ್ದು, ಸಿಸಿಬಿ ಪೊಲೀಸರು ಆತನನ್ನು ಹುಡುಕುತ್ತಿದ್ದಾರೆ. ಆತನನ್ನು ಬಂಧಿಸಿ ಬಳಿಕ ವಿಚಾರಣೆ ನಡೆಸಬೇಕಾಗಿದೆ. ಈ ಹಿನ್ನೆಲೆ ಆತ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಬಾರದು ಎಂದಿದ್ದಾರೆ.
ಸಿಸಿಬಿ ಪರ ವಕೀಲರ ಮಂಡಿಸಿದ ವಾದವನ್ನು ಆಲಿಸಿದ ಬಳಿಕ, ಆದಿತ್ಯ ಆಳ್ವಾ ಪ್ರಕರಣದ ತನಿಖೆ ಇನ್ನೂ ತನಿಖೆಯ ಹಂತದಲ್ಲಿದೆ. ಈಗ ಎಫ್ಐಆರ್ ರದ್ದುಗೊಳಿಸುವುದು ಸರಿಯಲ್ಲ ಎಂದು ಆದಿತ್ಯ ಆಳ್ವ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ನ್ಯಾಯಪೀಠ ರದ್ದುಗೊಳಿಸಿದೆ.
ಏತನ್ಮಧ್ಯೆ, ಬಾಲಿವುಡ್ ನಟ ವಿವೇಕ್ ಒಬೆರಾಯ್ ಅವರ ಪತ್ನಿ ಹಾಗೂ ಆದಿತ್ಯ ಆಳ್ವ ಅವರ ಸಹೋದರಿ ಪ್ರಿಯಾಂಕಾ ಅಳ್ವಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ಪೋಲಿಸರಿಂದ ನೋಟಿಸ್ ನೀಡಲಾಗಿದ್ದು, ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಕೇಳಿಕೊಂಡರೂ, ಮಳೆ ಹಾಗೂ ಇತರೆ ಕಾರಣ ನೀಡಿ ವಿಚಾರಣೆಗೆ ಹಾಜರಾಗಲಿಲ್ಲ. ವಿಚಾರಣೆಗಾಗಿ ಅಕ್ಟೋಬರ್ 20 ರಂದು ಖುದ್ದಾಗಿ ಹಾಜರಾಗಬೇಕು ಎಂದು ಸಿಸಿಬಿ ಪೊಲೀಸರು ವಾಟ್ಸಾಪ್ ಮೂಲಕ ಇನ್ನೊಂದು ನೋಟಿಸ್ ನೀಡಿದ್ದಾರೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.