ಬೆಂಗಳೂರು, ಅ. 18 (DaijiworldNews/PY): ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚಿವ ಎಸ್.ಸುರೇಶ್ ಕುಮಾರ್ ಅವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ವಿಚಾರವಾಗಿ ಸಚಿವರೇ ಸ್ವತಃ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದು, ನಿನ್ನೆ ರಾತ್ರಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆ ಸೇರಿದ್ದೇನೆ. ಅಕ್ಟೋಬರ್ 5 ರ ಸೋಮವಾರದಂದು ನನಗೆ ಕೊರೋನಾ ಸೋಂಕು ತಗುಲಿದೆ ಎಂದು ತಿಳಿದ ನಂತರ ಬಿಬಿಎಂಪಿ ವೈದ್ಯರ ತಂಡದ ಸಲಹೆಯಂತೆ ನಾನು ಮನೆಯಲ್ಲಿಯೇ ಹೋಂ ಐಸೋಲೇಷನ್ ನಲ್ಲಿದ್ದೆ. ವೈದ್ಯರು ಸೂಚಿಸಿದ ಔಷಧಗಳನ್ನು ತೆಗೆದುಕೊಳ್ಳುತ್ತಿದ್ದೆ. ಆದರೆ ಅಕ್ಟೋಬರ್ 10 ರಂದು ನನ್ನ ಮನೆಗೆ ಬಂದ ವೈದ್ಯರೊಬ್ಬರು ನನ್ನ ಉಸಿರಾಟದಲ್ಲಿ ವ್ಯತ್ಯಾಸವನ್ನು ಗಮನಿಸಿ ತಕ್ಷಣ ಪರೀಕ್ಷೆಗೆ ಒಳಗಾಗ ಬೇಕೆಂದು ಆಗ್ರಹಿಸಿದರು ಎಂದು ಹೇಳಿದ್ದಾರೆ.
ಅವರ ಸೂಚನೆ ಮೇರೆಗೆ ನಾನು ಅವರೊಡನೇ ಹೋಗಿ ಶ್ವಾಸಕೋಶದ ಸಿಟಿ ಸ್ಕ್ಯಾನ್ಗೆ ಒಳಗಾದೆ. ಆಗ ನನ್ನ ಶ್ವಾಸಕೋಶಕ್ಕೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿಯೇ ಸೋಂಕು ಹರಡಿದೆ ಎಂದು ತಿಳಿದುಬಂತು ಎಂದಿದ್ದಾರೆ.
ಕಳೆದ ಎಂಟು ದಿನಗಳಿಂದ ನನಗೆ ಎಲ್ಲಾ ರೀತಿಯ ಚಿಕಿತ್ಸೆ ನೀಡಿ, ಶುಶ್ರೂಷೆ ಮಾಡಿ ನನ್ನನ್ನು ಗುಣಮುಖನಾಗುವ ಹಾದಿಗೆ ತಂದ ಡಾ. ಶಶಾಂಕ್, ಡಾ. ಶ್ರೀನಾಥ್, ಡಾ. ಪೂರ್ಣ ಪ್ರಸಾದ್, ಡಾ.ಕೃಪೇಶ್ ಮತ್ತು ಎಲ್ಲಾ ದಾದಿಯರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ. ನನಗೆ ಇನ್ನೂ ಎರಡು ವಾರಗಳ ಕಾಲ ಮನೆಯಿಂದ ಹೋಗಬಾರದು ಎಂಬ ಷರತ್ತಿನ ಮೇಲೆ ನನ್ನನ್ನು ಬಿಡುಗಡೆ ಮಾಡಿದ್ದಾರೆ. ನಾನು ಡಾಕ್ಟರ್ ಪಾಲಿಸುತ್ತೇನೆ ಎಂದು ಮಾತು ಕೊಟ್ಟು ಮನೆ ಸೇರಿದ್ದೇನೆ. ಮನೆಯಲ್ಲಿ ಕೆಲ ಚಿಕಿತ್ಸೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.
ಸುರೇಶ್ ಕುಮಾರ್ ಅವರಿಗೆ ಅ.5ರಂದು ಕೊರೊನಾ ಸೋಂಕು ದೃಢ ಪಟ್ಟಿತ್ತು. ಹೋಂ ಐಸೋಲೇಶನ್ನಲ್ಲಿದ್ದ ಅವರು ಅ.10ರಂದು ವೈದ್ಯರ ಸಲಹೆಯ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದರು.