ಬೆಂಗಳೂರು, ಅ. 18 (DaijiworldNews/PY): ಕೊರೊನಾ ವಿರುದ್ಧ ಹೋರಾಡಿ ಹುತಾತ್ಮರಾದ 500ಕ್ಕೂ ಹೆಚ್ಚು ಕೊರೊನಾ ವಾರಿಯರ್ಸ್ಗಳ ಪೈಕಿ ಕೇವಲ ಒಬ್ಬರಿಗೆ ಮಾತ್ರ ಪರಿಹಾರ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕೊರೋನಾ ವಿರುದ್ಧ ಹೋರಾಡಿ ಹುತಾತ್ಮರಾದ 500 ಕ್ಕೂ ಅಧಿಕ ಕೊರೋನಾ ವಾರಿಯರ್ಸ್ಗಳ ಪೈಕಿ ಕೇವಲ ಒಬ್ಬರಿಗೆ ಮಾತ್ರ ಪರಿಹಾರ ಕೊಟ್ಟಿರುವುದು ಅತ್ಯಂತ ನಾಚಿಕೆಗೇಡಿನ ವಿಚಾರ. ಕೊರೋನಾ ಸೇನಾನಿಗಳ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲವೆ? ಹೀಗಿರುವಾಗ ವಾರಿಯರ್ಸ್ಗಳು ಜೀವದ ಹಂಗು ತೊರೆದು ಸೋಂಕಿನ ವಿರುದ್ಧ ಹೋರಾಡಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಪ್ರಾಣಾಪಾಯದ ನಡುವೆಯೂ ಸೋಂಕಿನ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್ಗಳ ಕರ್ತವ್ಯವನ್ನು ಸರ್ಕಾರ ಗೌರವಿಸಬೇಕು. ಸೋಂಕಿನ ವಿರುದ್ಧ ಹೋರಾಡಿ ಹುತಾತ್ಮರಾಗಿರುವ ಸೇನಾನಿಗಳ ಕುಟುಂಬ ಬೀದಿಗೆ ಬಂದಿದೆ. ಸರ್ಕಾರ ಕೂಡಲೆ ಹುತಾತ್ಮ ಸೇನಾನಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.