ಬೆಂಗಳೂರು,ಅ.18 (DaijiworldNews/HR): ಕಾಂಗ್ರೆಸ್ ನಾಯಕರಿಗೆ ಬಿಜೆಪಿಗಿಂತ ಜೆಡಿಎಸ್ ಪಕ್ಷದ ಮೇಲೆಯೇ ಅವರಿಗೆ ಕೋಪ, ಅಸೂಯೆ ಜಾಸ್ತಿ. ನನಗೆ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಇದೆ ಎಂದು ಇಲ್ಲಸಲ್ಲದ ಅಪಪ್ರಚಾರ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಡಿಎಸ್ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ, 2004ರಲ್ಲಿ ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬರಲಿಲ್ಲ. ಆಗ ಅನಿವಾರ್ಯವಾಗಿ ಕಾಂಗ್ರೆಸ್ ಜೊತೆ ಸರ್ಕಾರ ರಚನೆ ಮಾಡಬೇಕಾಯಿತು. ಆದರೆ ಆರು ತಿಂಗಳು ಸಂಪುಟ ವಿಸ್ತರಣೆ ಮಾಡಲೇ ಇಲ್ಲ. ಆದರೆ, ಅಂದೇ ಕಾಂಗ್ರೆಸ್ ನವರು ನಮ್ಮ ಪಕ್ಷವನ್ನು ಮುಗಿಸಲು ಆರಂಭಿಸಿದ್ದರು ಎಂದರು.
ಇನ್ನು ನನಗೆ ಬಿಜೆಪಿ ಅಭ್ಯರ್ಥಿ ಬಗ್ಗೆ ಸಾಫ್ಟ್ಕಾರ್ನರ್ ಇದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಜನರ ಹಣ ಲೂಟಿಮಾಡಿದವರ ಬಗ್ಗೆ ನಾನು ಮಾತಾಡಲ್ಲ. ಬೆವರು ಸುರಿಸಿ ದುಡಿದ ಹಣದಲ್ಲಿ ನಮ್ಮ ಅಭ್ಯರ್ಥಿ ಕೃಷ್ಣಮೂರ್ತಿ ಕೊರೊನಾ ಸಮಯದಲ್ಲಿ ಜನಕ್ಕೆ ಸಹಾಯ ಮಾಡಿದ್ದಾರೆ. ಆದರೆ, ಜನರ ಪಾಪದ ಹಣದಲ್ಲಿ ಬಿಜೆಪಿ ಅಭ್ಯರ್ಥಿ ಫುಡ್ಕಿಟ್ ನೀಡಿದ್ದಾರೆ ಎಂದು ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಜನರಿಗೆ ಶಾಶ್ವತ ಕಾರ್ಯಕ್ರಮಗಳನ್ನು ನೀಡಿದ್ದೇನೆ. ಪ್ರಧಾನಿ ಮೋದಿ ನಮ್ಮ ಮುಖ್ಯಮಂತ್ರಿ ಜೊತೆ ಮಾತನಾಡಲು ಸಮಯ ನೀಡುತ್ತಿಲ್ಲ ಎಂದರು.