ಬೆಂಗಳೂರು, ಅ. 18 (DaijiworldNews/PY): ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳನ್ನು ನಾವು ಭೇಟಿ ಮಾಡಿ ಒತ್ತಾಯಿಸಲಿದ್ದೇವೆ. ಇದರ ಜೊತೆಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ಪುನರ್ರಚಿಸಿ ಅಧ್ಯಕ್ಷರನ್ನು ನೇಮಕ ಮಾಡಲು ಆಗ್ರಹಿಸುತ್ತೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡು ಜಾರಿಗೆ ತರುವ ಜವಾಬ್ದಾರಿಯನ್ನು ಸಚಿವರಾದ ಕೆ.ಎಸ್.ಈಶ್ವರಪ್ಪ ವಹಿಸಿಕೊಂಡಿದ್ದಾರೆ. ಅವರ ಮಾತಿನ ಮೇಲೆ ವಿಶ್ವಾಸ ಇಟ್ಟಿದ್ದೇವೆ, ಇದಕ್ಕಾಗಿ ಹೋರಾಟ ಮಾಡುವ ಅಗತ್ಯ ಬರಲಾರದೆಂದು ನಂಬಿದ್ದೇವೆ ಎಂದಿದ್ದಾರೆ.
ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಜಾರಿಗೊಳಿಸುವಂತೆ ಮುಖ್ಯಮಂತ್ರಿಗಳನ್ನು ನಾವು ಭೇಟಿ ಮಾಡಿ ಒತ್ತಾಯಿಸಲಿದ್ದೇವೆ. ಇದರ ಜೊತೆಗೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವನ್ನು ಪುನರ್ರಚಿಸಿ ಅಧ್ಯಕ್ಷರನ್ನು ನೇಮಕ ಮಾಡಲು ಆಗ್ರಹಿಸುತ್ತೇವೆ ಎಂದು ತಿಳಿಸಿದ್ದಾರೆ.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿದ್ದ ಸಮೀಕ್ಷೆ ಹಿಂದುಳಿದ ಜಾತಿಗಳಿಗೆ ಸೀಮಿತವಾದುದಲ್ಲ. ಅದು ಸಮಾಜದಲ್ಲಿರುವ ಎಲ್ಲ ಜಾತಿಗಳ ಸಮೀಕ್ಷೆ. ಅದನ್ನು ಒಪ್ಪಿಕೊಂಡು ವೈಜ್ಞಾನಿಕ ರೀತಿಯಲ್ಲಿ ಜಾರಿಗೆ ತಂದರೆ ಎಲ್ಲ ಜಾತಿ-ಧರ್ಮಗಳಿಗೂ ಒಳಿತಾಗುತ್ತದೆ ಎಂದಿದ್ದಾರೆ.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಸಮೀಕ್ಷೆಗೆ ಚಾಲನೆ ನೀಡಿದ್ದೇ ನಮ್ಮ ಸರ್ಕಾರ. ನಮ್ಮ ಆಡಳಿತಾವಧಿಯಲ್ಲಿ ಸಮೀಕ್ಷೆ ಪೂರ್ಣಗೊಂಡಿದ್ದರೆ ನಾವೇ ಅನುಷ್ಠಾನಕ್ಕೆ ತರುತ್ತಿದ್ದೆವು. ಪೂರ್ಣಗೊಂಡಿಲ್ಲದ ಕಾರಣ ನಮಗೆ ಅದನ್ನು ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ.
ಕುರುಬರು ಮಾತ್ರವಲ್ಲ ಪರಿಶಿಷ್ಟ ಪಂಗಡದ ಗುಣಲಕ್ಷಣಗಳನ್ನು ಹೊಂದಿರುವ ಎಲ್ಲ ಹಿಂದುಳಿದ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬುದು ನನ್ನ ಅಭಿಪ್ರಾಯ. ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರ ಗಂಗಾಮತಸ್ಥರು, ಗೊಲ್ಲರು ಮತ್ತು ಗೊಂಡ-ರಾಜಾಗೊಂಡ ಸಮುದಾಯಗಳನ್ನು ಎಸ್.ಟಿ ಗೆ ಸೇರಿಸಬೇಕೆಂದು ಶಿಫಾರಸು ಮಾಡಿದ್ದೆ ಎಂದಿದ್ದಾರೆ.
ಗೊಲ್ಲರು, ಗಂಗಾಮತಸ್ಥರು, ಗೊಂಡರಂತೆ ಕುರುಬರು ಕೂಡಾ ತಮ್ಮನ್ನು ಎಸ್.ಟಿ ಗೆ ಸೇರಿಸಬೇಕೆಂದು ಕೇಳುತ್ತಾ ಬಂದಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಕುರುಬರು ಎಸ್.ಟಿ ಗೆ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್.ಟಿ ಗೆ ಸೇರಿಸಬೇಕೆಂದು ಕುರುಬರು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಿಸಬೇಕೆಂಬ ಬೇಡಿಕೆಗೆ ವಿರೋಧ ಇಲ್ಲ. ನಮ್ಮ ಸರ್ಕಾರ ಎಸ್ ಸಿಪಿ-ಟಿಎಸ್ ಪಿ ಕಾಯ್ದೆ ಜಾರಿಗೊಳಿಸಿದಾಗ ಪರಿಶಿಷ್ಟ ಜಾತಿಯವರಿಗೆ 17.1% ಮತ್ತು ಪರಿಶಿಷ್ಟ ಪಂಗಡಕ್ಕೆ 6.95% ನಷ್ಟು ಮೀಸಲಾತಿ ಕಲ್ಪಿಸಿದ್ದೆವು. ಆದ್ದರಿಂದ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು 7.5%ಕ್ಕೆ ಹೆಚ್ಚಿಸುವುದು ನ್ಯಾಯಸಮ್ಮತವಾಗಿದೆ ಎಂದಿದ್ದಾರೆ.
ಸಮಾಜದ ಎಲ್ಲ ಜಾತಿಗಳಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರದಲ್ಲಿ ಮೀಸಲಾತಿ ಕಲ್ಪಿಸಿದಾಗಲೇ ಸಾಮಾಜಿಕ ನ್ಯಾಯ ಸಂಪೂರ್ಣವಾಗಿ ಅನುಷ್ಠಾನಗೊಳ್ಳಲು ಸಾಧ್ಯ. ಇದೇ ನಮ್ಮೆಲ್ಲರ ಒಮ್ಮತದ ಬೇಡಿಕೆಯಾಗಿದೆ ಎಂದು ಹೇಳಿದ್ದಾರೆ.