ಬೆಂಗಳೂರು, ಅ. 19 (DaijiworldNews/MB) : ''ರಾಜರಾಜೇಶ್ವರಿ ನಗರದಲ್ಲಿ ಬೇರೆ ಪಕ್ಷಗಳು ಏನು ಮಾಡುತ್ತಿದೆ ಎಂಬುದು ನಮಗೆ ಬೇಕಾಗಿಲ್ಲ. ನಾವು ಮಾತ್ರ ಈ ಕ್ಷೇತ್ರದಲ್ಲಿ ನಡೆಯುವ ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಸಿದ್ಧಾಂತ, ಅಭ್ಯರ್ಥಿಯನ್ನು ಆಧಾರಿಸಿ ಮತಯಾಚನೆ ಮಾಡುತ್ತೇವೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಅವರು ಉಪಚುನಾವಣೆಗೆ ಸಂಬಂಧಿಸಿ, ''ಯಾರು ಯಾರೊಂದಿಗೂ ನೆಂಟಸ್ತಿಕೆ ಮಾಡಿಕೊಳ್ಳಿ ಅಥವಾ ಮೈತ್ರಿಯನ್ನಾದರೂ ಮಾಡಿಕೊಳ್ಳಲಿ. ನಾವು ಆ ಕುರಿತಾಗಿ ಚಿಂತಿಸಲ್ಲ'' ಎಂದು ಹೇಳಿದರು.
ಈ ಸಂದರ್ಭದಲ್ಲೇ ಬಿಜೆಪಿ ನಾಯಕ ವಿಜಯೇಂದ್ರ ಅವರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮೂರನೇ ಸ್ಥಾನ ಪಡೆಯಲಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ''ವಿಜಯೇಂದ್ರ ಅವರಿಗೆ ಶುಭಕೋರುತ್ತೇನೆ'' ಎಂದರು.
ಇನ್ನು ಕೊರೊನಾ ನಿರ್ವಹಣೆ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ''ರಾಜ್ಯ ಸರ್ಕಾರವು ಕೊರೊನಾ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. ಸರ್ಕಾರವು ತನ್ನ ವೈಫಲ್ಯವನ್ನು ಬಿಬಿಎಂಪಿ ಆಯುಕ್ತರು, ಇಲಾಖೆಗಳ ಅಧಿಕಾರಿಗಳು ಹಾಗೂ ಆರೋಗ್ಯ ಸಚಿವರ ಬದಲಾವಣೆ ಮಾಡುವ ಮೂಲಕ ಒಪ್ಪಿಕೊಂಡಿದ್ದಾರೆ. ಸರ್ಕಾರದ ಈ ಅಸಮರ್ಥ ನಿರ್ವಹಣೆಯಿಂದ ನಾಡಿನ ಜನರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ'' ಎಂದು ಹೇಳಿದರು.