ಶಿವಮೊಗ್ಗ, ಅ. 19 (DaijiworldNews/MB) : ಸರ್ಕಾರದಿಂದ ಪ್ರವಾಹ ಸಂತ್ರಸ್ತರು, ರೈತರಿಗೆ ಪರಿಹಾರ ಲಭಿಸಲಿದೆ ಎಂದು ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಭರವಸೆ ನೀಡಿದರು.
''ಮಲೆನಾಡು ಭಾಗದಲ್ಲಿ ಸಕಾಲದಲ್ಲಿ ಉತ್ತಮ ಮಳೆಯಾದ ಹಿನ್ನೆಲೆ ಜನರು ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಆದರೆ ಇದೀ ಸಂದರ್ಭದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಅತಿವೃಷ್ಟಿಯಿಂದ ಬೆಳೆ ನಾಶವಾಗಿ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಸರ್ಕಾರ ಜನರಿಗೆ ನೆರವು ನೀಡಲು ಬದ್ದ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಪ್ರವಾಹ ಸ್ಥಿತಿಯ ಬಗ್ಗೆ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿಸಿದ ಅವರು, ರಾಜ್ಯ ಸರ್ಕಾರದಿಂದ ಶಕ್ತಿ ಮೀರಿ ಪ್ರವಾಹ ಸಂತ್ರಸ್ತರು, ರೈತರಿಗೆ ಪರಿಹಾರ ನೀಡಲಾಗುತ್ತದೆ. ಮನೆಯನ್ನು ನಿರ್ಮಿಸಿಕೊಡಲಾಗುತ್ತದೆ. ರೈತನ ಬೆಳೆಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡಲಾಗುವುದು. ಜನರೊಂದಿಗೆ ನಾವಿದ್ದೇವು'' ಎಂದರು.
ಇನ್ನು ಈ ಸಂದರ್ಭದಲ್ಲೇ ಉಪಚುನಾವಣೆ ಬಗ್ಗೆ ಮಾತನಾಡಿದ ಅವರು, ''ಆರ್ಆರ್ ನಗರ, ಶಿರಾದಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲುತ್ತಾರೆ. ಅದರಲ್ಲಿ ಯಾವುದೇ ಅನುಮಾನವಿಲ್ಲ. ದೊಡ್ಡ ಅಂತರದಲ್ಲೇ ಗೆಲುವ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ಆರಂಭದಲ್ಲಿ ಶಿರಾ ಕ್ಷೇತ್ರದ ಬಗ್ಗೆ ಸಂಶಯವಿತ್ತು. ಆದರೆ ಈಗ ಉಆವುದೇ ಸಂಶಯವಿಲ್ಲ. ಗೆಲುವು ನಮ್ಮದು, ಈಗ ಗೆಲುವಿನ ಅಂತರವೆಷ್ಟು ಎಂಬುದು ಮಾತ್ರ ಸದ್ಯದ ವಿಚಾರ'' ಎಂದು ಹೇಳಿದ್ದಾರೆ.