ಬೆಂಗಳೂರು, ಅ. 19 (DaijiworldNews/MB) : ''ಕಾಂಗ್ರೆಸ್ ಬಗ್ಗೆ ಮಾತನಾಡೋ ಮುನ್ನ ಸಿಟಿ ರವಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ'' ಎಂದು ಕಾಂಗ್ರೆಸ್ ನಾಯಕ ಈಶ್ವರ್ ಖಂಡ್ರೆಯವರು ಬಿಜೆಪಿ ನಾಯಕ ಸಿಟಿ ರವಿಯವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವಿರುದ್ದ ಸಿ ಟಿ ರವಿಯವರು ನೀಡಿದ ಹೇಳಿಕೆಗೆ ತಿರುಗೇಟು ನೀಡಿದ ಅವರು, ''ಬಿಜೆಪಿಗೆ ನಾಯಕರಿಲ್ಲದೆ ಕಾಂಗ್ರೆಸ್ ಶಾಸಕರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಆಪರೇಷನ್ ಕಮಲ ನಡೆಯುತ್ತಿದೆ. ಕಾಂಗ್ರೆಸ್ ಬಗ್ಗೆ ಮಾತನಾಡುವುದಕ್ಕೂ ಮುನ್ನ ಸಿಟಿ ರವಿಯವರು ಆತ್ಮಾವಲೋಕನ ಮಾಡಿಕೊಳ್ಳಲಿ'' ಎಂದು ಸಿಡಿಮಿಡಿಗೊಂಡಿದ್ದಾರೆ.
''ಬಿಜೆಪಿಯು ತಮ್ಮ ವಿರೋಧಿಗಳಿಗೆ ಬ್ಲ್ಯಾಕ್ ಮೇಲ್ ಮಾಡಿ ಭಯ ಹುಟ್ಟಿಸುತ್ತಿದೆ. ಸೇಡಿನ ರಾಜಕೀಯ ಮಾಡುತ್ತಿದೆ. ಉಪಚುನಾವಣೆ ಬರುತ್ತಿರುವಾಗಲೇ ಡಿಕೆ.ಶಿವಕುಮಾರ್ ಅವರ ಮೇಲೆ ಸಿಬಿಐ ದಾಳಿ ನಡೆಸಿದೆ. ಆರ್ಆರ್ನಗರದ ಕಾಂಗ್ರೆಸ್ ಅಭ್ಯರ್ಥಿ ಮೇಲೆ ಎಫ್ಐಆರ್ ದಾಖಲಾಗುವಂತೆ ಬಿಜೆಪಿ ಮಾಡಿದೆ'' ಎಂದು ಆರೋಪ ಮಾಡಿದರು.
ಇನ್ನು ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ''ಕನಕಪುರದಿಂದ ಬಂದವರು ಇಲ್ಲಿ ಗೂಂಡಾಗಿರಿ ನಡೆಸಿದ್ದಾರೆ. ಆದರೆ ಅವರ ಈ ಗೂಂಡಾಗಿರಿ ಇಲ್ಲ ಕೆಲಸಕ್ಕೆ ಬರಲ್ಲ. ಉಪಚುನಾವಣೆಯ ಬಳಿಕ ಬಿಜೆಪಿಗೆ ಸಿಹಿ ಸುದ್ದಿ ಇದೆ'' ಎಂದು ವ್ಯಂಗ್ಯವಾಡಿದರು.