ಭೋಪಾಲ್, ಅ. 19 (DaijiworldNews/MB) : ಮಧ್ಯ ಪ್ರದೇಶ ಸರ್ಕಾರದ ಸಚಿವೆ ಇಮರ್ತಿ ದೇವಿ ಅವರನ್ನು ಐಟಮ್ ಎಂದು ಕರೆಯುವ ಮೂಲಕ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ವಿವಾದ ಸೃಷ್ಟಿಸಿದ್ದಾರೆ.
ಈ ಹಿಂದೆ ಕಾಂಗ್ರೆಸ್ನಲ್ಲಿದ್ದ ಇಮರ್ತಿ ದೇವಿ ಅವರು ಗ್ವಾಲಿಯರ್ನ ದಬ್ರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೂರು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದರು. ಪ್ರಸ್ತುತ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆಯಾಗಿರುವ ಅವರು ಈಗ ಮತ್ತೆ ಗ್ವಾಲಿಯರ್ನ ದಬ್ರಾ ಕ್ಷೇತ್ರದಲ್ಲಿ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಕಮಲ್ ನಾಥ್ ಸರ್ಕಾರವಿದ್ದ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ವಹಿಸಿದ್ದು ಏಳು ತಿಂಗಳ ಹಿಂದೆ ಸರ್ಕಾರ ಉರುಳಿದ್ದು ಪ್ರಸ್ತುತ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ.
ಭಾನುವಾರ ದಬ್ರಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ರಾಜೆ ಅವರ ಪರ ಮತ ಯಾಚನೆ ಮಾಡಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕಮಲ್ ನಾಥ್ ಅವರು, ನಮ್ಮ ಅಭ್ಯರ್ಥಿ ಸರಳ ವ್ಯಕ್ತಿ, ಆಕೆಯಂತಲ್ಲ, ಆಕೆಯ ಹೆಸರೇನು, ನನಗಿಂತ ಚೆನ್ನಾಗಿ ನಿಮಗೆಲ್ಲಾ ಆಕೆಯ ಬಗ್ಗೆ ತಿಳಿದಿದೆ. ನೀವು ಮೊದಲೇ ನನಗೆ ಎಚ್ಚರಿಕೆ ನೀಡಬೇಕಿತ್ತು. ಆಕೆ ಎಂತಹ ಐಟಮ್ ಎಂದು ಹೇಳಿದ್ದಾರೆ.
ಇನ್ನು ಇದಕ್ಕೆ ತಿರುಗೇಟು ನೀಡಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್, ಕಮಲ್ ನಾಥ್ ಅವರು ಹಿರಿಯ ರಾಜಕಾರಿಣಿಯಾಗಿ ಈ ರೀತಿ ಹೇಳಿಕೆ ನೀಡಿರುವುದು ಅಘಾತವನ್ನು ಮಾಡಿದೆ. ನಮ್ಮ ಸಂಪುಟದ ಸಚಿವೆ ಅದರಲ್ಲೂ ಮುಖ್ಯವಾಗಿ ಓರ್ವ ಮಹಿಳೆಯ ಬಗ್ಗೆ ಈ ರೀತಿ ಮಾತನಾಡುವುದು ನಾಚಿಕೆಗೇಡಿನ ವಿಚಾರ. ಇದರಿಂದಾಗಿ ಮಹಿಳೆಯರು, ದಲಿತರಿಗೆ ಅವಮಾನ ಮಾಡಿದಂತಾಗಿದೆ ಎಂದು ಹೇಳಿದ್ದಾರೆ.