ಬೆಂಗಳೂರು, ಅ. 19 (DaijiworldNews/PY): ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದು, ಇದರಿಂದ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಅವರಿಗೆ ಮತ್ತಷ್ಟು ಉತ್ತೇಜನ ಸಿಕ್ಕಿದಂತಾಗಿದೆ.
ಬಿಜೆಪಿಗೆ ಸೇರ್ಪಡೆಗೊಂಡ 34 ನಾಯಕರ ಪೈಕಿ ಮಾಜಿ ಮೇಯರ್, ಮಾಜಿ ಕಾರ್ಪೋರೇಟರ್ಗಳು, ಸ್ಥಳೀಯ ಆಡಳಿತ ಮಂಡಳಿಗಳ ಸದಸ್ಯರು, ಸಹಕಾರಿ ಸಂಘಗಳು ಸೇರಿವೆ. ವಿವಿಧ ಸಮುದಾಯಗಳ ನಾಯಕರು ಬಿಜೆಪಿಗೆ ಸೇರ್ಪಡೆಯಾದ ಕಾರಣ ನವೆಂಬರ್ 3ರಂದು ನಡೆಯಲಿರುವ ಉಪ ಚುನಾವಣೆ ಇನ್ನಷ್ಟು ರಂಗೇರಿದೆ.
ಬಿಜೆಪಿಗೆ ಸೇರ್ಪಡೆಗೊಂಡ 34 ನಾಯಕರಲ್ಲಿ ಮಾಜಿ ಮೇಯರ್ ಕಾರ್ಪೋರೇಟರ್ ನಾರಾಯಣ ಸ್ವಾಮಿ, ಮಾಜಿ ಕಾರ್ಪೋರೇಟರ್ಗಳಾದ ಶ್ರೀನಿವಾಸ ಮೂರ್ತಿ, ಜಿ.ಕೆ.ವೆಂಕಟೇಶ್, ವೇಲು ನಾಯಕ್, ಸಿದ್ದೆ ಗೌಡ, ಮೋಹನ್ ಕುಮಾರ್, ವೆಂಕಟ್ ಇ.ಎಸ್.ಬಾಬು, ಗೋವಿಂದ ರಾಜು, ಸುನಂದಾಬೋರೇ ಗೌಡ್ರು, ಗೋವಿಂದರಾಜು ಸೇರಿದಂತೆ ಸ್ಥಳೀಯ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಸೇರ್ಪಡೆಗೊಂಡಿದ್ದಾರೆ.
ಸೇರ್ಪಡೆಗೊಂಡ ನಾಯಕರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕಂದಾಯ ಸಚಿವ ಆರ್.ಅಶೋಕ್ ಸ್ವಾಗತಿಸಿದರು.