ಮೈಸೂರು, ಅ. 19 (DaijiworldNews/PY): ಕಳೆದ ಬಾರಿ ಸರಿಯಾದ ಸರ್ಕಾರ ಇರಲಿಲ್ಲ. ಅಸ್ಥಿರ ಸರ್ಕಾರ ಇತ್ತು. ಈ ಹಿನ್ನೆಲೆ ಜನರು ಸ್ಥಿರವಾದ ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ ಎಂದು ಡಿಸಿಎಂ ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನತೆ ಹಿಂದಿನ ಅಸ್ಥಿರ ಸರ್ಕಾರದಿಂದ ಬೇಸತ್ತು ಹೋಗಿದ್ದಾರೆ. ಹಾಗಾಗಿ ಸ್ಥಿರ ಸರ್ಕಾರಕ್ಕೆ ಜನರು ಬೆಂಬಲ ನೀಡುತ್ತಾರೆ ಎಂದಿದ್ದಾರೆ.
ವಿರೋಧ ಪಕ್ಷಗಳು ಜನರನ್ನು ಭಾವನಾತ್ಮಕವಾಗಿ ತಿರುಗಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ, ಇವರು ಮಾಡುವ ತಪ್ಪುಗಳು ಜನರಿಗೆ ತಿಳಿದೇ ಇದೆ. ಯಾವ ಪ್ರತಿಷ್ಠೆ ಇಟ್ಟುಕೊಂಡು ಇವರು ಜನರ ಎದುರು ಮಾತನಾಡುತ್ತಾರೆ? ಎಂದು ಕೇಳಿದ್ದಾರೆ.
ಕಾಂಗ್ರೆಸ್ ಹಾಗೂ ಜೆಡಿಎಸ್ ಈಗಲೂ ಕೂಡಾ ಕಚ್ಚಾಡಿಕೊಳ್ಳುತ್ತಿವೆ. ಕಾಂಗ್ರೆಸ್ ಜೊತೆಯಲ್ಲೇ ಇದ್ದು ಗುಂಡಿ ತೋಡಿದ್ದು ಜೆಡಿಎಸ್ಗೆ ತಿಳಿದಿರುವ ವಿಚಾರ. ಇಂತ ಕುತಂತ್ರ ಮಾಡಿರುವವರು ಯಾರು ಎಂದು ಜನರಿಗೂ ತಿಳಿದಿದೆ. ಜನತೆ ಸ್ಥಿರವಾದ ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ ಎನ್ನುವ ಭರವಸೆ ಇದೆ ಎಂದಿದ್ದಾರೆ.
ಉಪ ಚುನಾವಣೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಶಿರಾ ಹಾಗೂ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿಯೇ ವಿಜಯಶಾಲಿಯಾಗಲಿದೆ. ಇಲ್ಲ ನಮ್ಮ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಜಯಶಾಲಿಗಳಾಗಲಿದ್ದಾರೆ ಎಂದು ಹೇಳಿದ್ದಾರೆ.