ಶಿವಮೊಗ್ಗ, ಅ. 19 (DaijiworldNews/PY): ಕೊರೊನಾ ಹಾಗೂ ಪ್ರವಾಹದ ನಡುವೆ ಅಭಿವೃದ್ದಿ ನಿಲ್ಲಬಾರದು. ಮುಂದಿನ ಎರಡು ವರ್ಷಗಳಲ್ಲಿ ಶಿವಮೊಗ್ಗ ಹಾಗೂ ಶಿಕಾರಿಪುರದಲ್ಲಿ ಯಾವುದೇ ಅಭಿವೃದ್ದಿ ಕಾರ್ಯ ಬಾಕಿ ಉಳಿಯಬಾರದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶಿಕಾರಿಪುರದಲ್ಲಿ ಕಸಬಾ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಕೊರೊನಾ ಹಾಗೂ ಪ್ರವಾಹ ನಿರ್ವಹಣೆಯು ಸರ್ಕಾರದ ಮುಂದಿರುವ ಪ್ರಮುಖ ಕಾರ್ಯವಾಗಿದೆ. ಕೊರೊನಾ ನಿಯಂತ್ರಣದೊಂದಿಗೆ ಉತ್ತರ ಕರ್ನಾಟಕದಲ್ಲಾದ ಪ್ರವಾಹದಿಂದ ತತ್ತರಿಸಿರುವ ಜನರಿಗೆ ಪರಿಹಾರ ನೀಡಬೇಕಾಗಿದೆ. ಇವೆಲ್ಲದರ ನಡುವೆ ರಾಜ್ಯದ ಅಭಿವೃದ್ದಿಗೂ ಗಮನ ಹರಿಸಬೇಕು ಎಂದರು.
ಇಂದು ಸುಮಾರು 198 ಕೋಟಿ ರೂ ವೆಚ್ಚದಲ್ಲಿ ಬಹು ವರ್ಷದ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೇನೆ. ಶಿವಮೊಗ್ಗದ ಎಲ್ಲಾ ನೀರಾವರಿ ಯೋಜನೆಗಳಿಗೆ ಚಾಲನೆ ನೀಡಲು ಸರ್ಕಾರ ಬದ್ದ ಎಂದು ತಿಳಿಸಿದರು.
ಉಡುತಡಿ ಅಭಿವೃದ್ದಿ ಕೂಡಾ ಆದಷ್ಟು ಬೇಗ ಪೂರ್ಣವಾಗಲಿದೆ. ಕೊರೊನಾ ಹಾಗೂ ಪ್ರವಾಹದ ನಡುವೆಯೂ ಅಭಿವೃದ್ದಿ ಕಾರ್ಯ ನಿಲ್ಲಬಾರದು. ಎಲ್ಲರ ಸಹಕಾರದೊಂದಿಗೆ ಕಾಮಗಾರಿಗಳಿಗೆ ಚಾಲನೆ ನೀಡುತ್ತಿದ್ದೇನೆ. ಎಲ್ಲಾ ಜಿಲ್ಲೆಗಳ ಅಭಿವೃದ್ದಿಗೆ ಪಣತೊಟ್ಟಿದ್ದೇನೆ ಎಂದರು.
ವೈಮಾನಿಕ ಸಮೀಕ್ಷೆಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರವಾಗಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಮಾತನಾಡಿದ್ದು, ಅಗತ್ಯ ನೆರವು ಒದಗಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ವೈಮಾನಿಕ ಸಮೀಕ್ಷೆಯ ಮುಖೇನ ನೆರೆ ಹಾನಿಯ ಬಗ್ಗೆ ಪರಿಶೀಲನೆ ಮಾಡಲಾಗುವುದು. ಬಳಿಕ ಇದಕ್ಕೆ ಸೂಕ್ತವಾದ ಕ್ರಮ ತೆಗೆದುಕೊಳ್ಳಲಾಗುವುದು. ಸಂತ್ರಸ್ತರಿಗೆ ಈಗಾಗಲೇ ನೆರೆ ಪರಿಹಾರ ಕ್ರಮ ನೀಡಲಾಗುತ್ತಿದೆ. ಅಲ್ಲದೇ, ಇನ್ನು ಹೆಚ್ಚಿನ ಕ್ರಮಕ್ಕಾಗಿ ಸೂಚನೆ ನೀಡಲಾಗುವುದು ಎಂದರು.