ನವದೆಹಲಿ, ಅ. 19 (DaijiworldNews/PY): ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ಅವರು ಇಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು.
ಪದಗ್ರಹಣಕ್ಕೂ ಮೊದಲು ತೇಜಸ್ವಿ ಸೂರ್ಯ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಅಲ್ಲಿಂದ ಬಿಜೆಪಿ ಪ್ರಧಾನ ಕಚೇರಿಯ ತನಕ ರೋಡ್ ಶೋ ಮಾಡಿದರು.
ದೆಹಲಿಯ ಬಿಜೆಪಿ ಕಚೇರಿಯಲ್ಲಿ ಪದಗ್ರಹಣ ಮಾಡಿದ ಅವರು, ನಿರ್ಗಮಿತ ಅಧ್ಯಕ್ಷೆ ಪೂನಂ ಮಹಾಜನ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಪದಗ್ರಹಣದ ನಂತರ ಮಾತನಾಡಿದ ಅವರು, ಹಿರಿಯರ ಆಶೀರ್ವಾದದಿಂದ ಅಧ್ಯಕ್ಷನಾಗಿ ನೇಮಕನಾಗಿದ್ದೇನೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸಂಘಟನೆಯನ್ನು ಬಲಪಡಿಸಲಿದ್ದೇವೆ. ಹಿಂದುಳಿದ ಸಮಾಜ ಸೇರಿದಂತೆ ವರ್ಗಗಳನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಬಳಿಕ ಮಾತನಾಡಿದ ನಿರ್ಗಮಿತ ಅಧ್ಯಕ್ಷೆ ಪೂನಂ ಮಹಾಜನ್ ಅವರು, ಇದೇ ಮೊದಲ ಬಾರಿ ಯುವ ಮೋರ್ಚಾಕ್ಕೆ ಕನ್ನಡಿಗರು ಅಧ್ಯಕ್ಷರಾಗುತ್ತಿರುವುದು. ನನ್ನ ತಮ್ಮನಂತಿರುವ ತೇಜಸ್ವೀ ಸೂರ್ಯಗೆ ಅಧಿಕಾರ ಹಸ್ತಾಂತರ ಮಾಡುತ್ತಿರುವುದು ಸಂತಸದ ವಿಚಾರ. ಭವಿಷ್ಯದ ರಾಜಕಾರಣಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ.