ನವದೆಹಲಿ, ಅ. 20 (DaijiworldNews/PY): ಕೊರೊನಾ ವೈರಸ್ ದಿನಪತ್ರಿಕೆಗಳ ಮೂಲಕ ಹರಡುತ್ತದೆ ಎನ್ನುವುದು ನಿರಾಧಾರವಾದುದು. ದಿನಪತ್ರಿಕೆಗಳಿಂದ ಕೊರೊನಾ ವೈರಸ್ ಹರಡುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಹೇಳಿದ್ದಾರೆ.
ವಾರದ ವಿಡಿಯೊ ಕಾರ್ಯಕ್ರಮದ ಸಂವಾದದಲ್ಲಿ ಪಲ್ಲವಿ ಝಾ ಎನ್ನುವವರು ದಿನಪತ್ರಿಕೆ ಇಲ್ಲದೇ ಬೆಳಗ್ಗಿನ ಚಹಾ ಕೂಡಾ ಹಿಡಿಸುವುದೇ ಇಲ್ಲ. ಸೋಂಕು ತಗುಲಬಹುದು ಎನ್ನುವ ಭೀತಿಯಿಂದ ಮನೆಗೆ ಎಂಟು ತಿಂಗಳಿನಿಂದ ದಿನಪತ್ರಿಕೆ ತರಿಸಿಲ್ಲ. ನಾವೂ ಈಗ ದಿನಪತ್ರಿಕೆ ತರಿಸಿಕೊಳ್ಳಬಹುದೇ ಎಂದು ಕೇಳಿದ್ದರು.
ಪಲ್ಲವಿ ಝಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ನೀವು ನಮ್ಮ ಹ್ಯಾಕರ್ಗೆ ಕರೆ ಮಾಡಿ ನಾಳೆಯಿಂದಲೇ ದಿನಪತ್ರಿಕೆ ಹಾಕಲು ತಿಳಿಸಿ. ಏಕೆಂದರೆ, ದಿನಪತ್ರಿಕೆಗಳ ಮೂಲಕ ಕೊರೊನಾ ವೈರಸ್ ಬರುವುದಿಲ್ಲ. ಅಲ್ಲದೇ, ಈ ವಿಚಾರ ನಿರಾಧಾರವಾದದ್ದು. ಕೊರೊನಾ ವೈರಸ್ ದಿನಪತ್ರಿಕೆಗಳ ಮೂಲಕ ಹರಡುತ್ತದೆ ಎಂದು ಇಲ್ಲಿಯವರೆಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳು ತಿಳಿಸಿಲ್ಲ. ಈ ಹಿನ್ನೆಲೆ ಕೊರೊನಾ ವೇಳೆ ದಿನಪತ್ರಿಕೆ ಓದಬಹುದು ಎಂದಿದ್ದಾರೆ.
ಕೊರೊನಾ ವೈರಸ್ ಎನ್ನುವುದು ಉಸಿರಾಟಕ್ಕೆ ಸಂಬಂಧಪಟ್ಟಂತ ವೈರಾಣು. ಕೊರೊನಾ ಸೋಂಕಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಹೊರಬರುವ ಕಣಗಳಲ್ಲಿ ಕೊರೊನಾ ವೈರಸ್ ಇರುತ್ತದೆ. ಇದರಿಂದ ಕೊರೊನಾ ವೈರಸ್ ಹರಡುತ್ತದೆ. ಹಾಗಾಗಿ ದಿನಪತ್ರಿಗಳ ಮುಖೇನ ಕೊರೊನಾ ವೈರಸ್ ಹರಡುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ಮಾರ್ಚ್ನಲ್ಲಿ ವಿಶ್ವಸಂಸ್ಥೆ, ಕೊರೊನಾ ವೈರಸ್ ದಿನಪತ್ರಿಕೆಗಳ ಮೂಲಕ ಹರಡುವುದಿಲ್ಲ ಎಂದು ತಿಳಿಸಿತ್ತು.