ಚಿತ್ರದುರ್ಗ, ಅ. 20 (DaijiworldNews/MB) : ''ಸಿದ್ದರಾಮಯ್ಯನವರಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಪರ್ಸೆಂಟೇಜ್ ಸರ್ಕಾರವಿತ್ತು. ಅದಕ್ಕೆ ಅವರು ಏನೆಲ್ಲಾ ಮಾಡಿದ್ದರೋ ಅದೆಲ್ಲಾವನ್ನು ಈಗೀನ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ'' ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಹೇಳಿದ್ದಾರೆ.
ಸೋಮವಾರ ರಾತ್ರಿ ಮುರುಘಾ ಮಠಕ್ಕೆ ಭೇಟಿ ನೀಡಿ ಶಿವಮೂರ್ತಿ ಮುರುಘಾ ಶರಣರ ಆಶೀರ್ವಾದ ಪಡೆದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಜಾತಿ ನಿಂದನೆ ಪ್ರಕರಣ ದಾಖಲು ಮಾಡುವುದು, ಬೆದರಿಕೆ ಹಾಕುವುದು, ಮನೆಗಳ ಮೇಲೆ ಕಲ್ಲು ತೂರಾಟ ಮಾಡುವುದೆಲ್ಲವೂ ಕನಕಪುರದ ಸಂಸ್ಕೃತಿ, ಬಿಜೆಪಿಯ ಸಂಸ್ಕೃತಿಯಲ್ಲ'' ಎಂದು ಡಿಕೆಶಿಗೆ ಟಾಂಗ್ ನೀಡಿದರು.
''ಕಾಂಗ್ರೆಸ್ ಬೆದರಿಕೆ ಹಾಕುವ ಸಂಸ್ಕೃತಿಯನ್ನು ರಾಜ್ಯಕ್ಕೆ ವಿಸ್ತರಣೆ ಮಾಡಲು ತೊಡಗಿದ್ದು ನಾವು ಈ ಕೃತ್ಯಕ್ಕೆ ಅವಕಾಶ ನೀಡುವುದಿಲ್ಲ. ಕುದುರೆ ಜೂಜು ಆಡುವವರನ್ನು ಕರೆದುಕೊಂಡು ಬಂದು ರಾಜ್ಯಸಭೆ, ವಿಧಾನಸಭೆಗೆ ಆಯ್ಕೆ ಮಾಡಿದ್ದನ್ನು ನಾವು ನೋಡಿದ್ದೇವೆ. ವಿಧಾನಪರಿಷತ್ತು ಹಾಗೂ ರಾಜ್ಯಸಭೆಯನ್ನು ಕೂಡಾ ವ್ಯಾಪಾರ ನಡೆಸಿದ ಪಕ್ಷಗಳನ್ನು ನೋಡಿದ್ದೇವೆ'' ಎಂದು ಹೇಳಿದರು.
''ಬಿಜೆಪಿಯು ಸಾಮಾನ್ಯ ಜನರನ್ನು ರಾಜ್ಯ ಸಭೆಗೆ ಆಯ್ಕೆ ಮಾಡಿದ ಪಕ್ಷ. ಬೇರೆ ಪಕ್ಷಗಳಿಗೆ ಯಾರು ಯಾರೋ ಮಾಲೀಕರಾಗಿದ್ದಾರೆ. ಆದರೆ ಬಿಜೆಪಿಗೆ ಕಾರ್ಯಕರ್ತರೇ ಮಾಲೀಕರು. ನಮ್ಮ ಸರ್ಕಾರವು ಕೊರೊನಾ, ನೆರೆ ಎಲ್ಲವನ್ನೂ ಜೊತೆಯಾಗಿ ನಿಭಾಯಿಸುತ್ತಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿಯವರು ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ. ಅಗತ್ಯವಾದ ಹಣಕಾಸು ನೆರವು ನೀಡಲಾಗಿದೆ. ಆಯಾ ಜಿಲ್ಲಾ ಉಸ್ತುವಾರಿ ಸಚಿವರು ನೆರೆಪೀಡಿತ ಪ್ರದೇಶಕ್ಕೆ ತೆರಳಿ ಸಂತ್ರಸ್ತರಿಗೆ ಸಹಾಯ ಮಾಡುತ್ತಿದ್ದಾರೆ'' ಎಂದು ಹೇಳಿದರು.