ರಾಮನಗರ, ಅ. 20 (DaijiworldNews/PY): ನನ್ನಿಂದ ಉಪಕಾರ ಪಡೆದುಕೊಂಡ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಅವರು ಇದೀಗ ನನ್ನ ಬಗ್ಗೆಯೇ ತುಚ್ಚವಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕೇತಗಾನಹಳ್ಳಿಯ ತೋಟದ ಮನೆಯಲ್ಲಿ ನಡೆದ ಶಿಕ್ಷಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ಪುಟ್ಟಣ್ಣ ಅವರ ಕುಟುಂಬದ ಸುಮಾರು 10-12 ಮಂದಿಗೆ ಪ್ರಥಮ ವರ್ಗ ಅಧಿಕಾರಿಗಳ ಕೆಲಸ ಕೊಡಿಸಿದ್ದೇನೆ. ಆದರೆ, ಇದೀಗ ನನ್ನ ಬಗ್ಗೆ ತುಚ್ಚವಾಗಿ ಮಾತನಾಡುತ್ತಿದ್ದಾರೆ ಎಂದಿದ್ದಾರೆ.
ನಾನು ಅಧಿಕಾರದಲ್ಲಿದ್ದ ಸಂದರ್ಭ ಶಿಕ್ಷಕರ-ಉಪನ್ಯಾಸಕರ ನೇಮಕಾತಿಯಾಗಿತ್ತು. ಆ ಸಂದರ್ಭ ಆ ವ್ಯಕ್ತಿ ಅರ್ಜಿ ಹಿಡಿದುಕೊಂಡು ಈ ಕೆಲಸ ಮಾಡಿಕೊಡಿ ಅಣ್ಣ ಎಂದು ನನ್ನ ಬಳಿ ಬಂದಿದ್ದರು. ಹಾಗಾಗಿ ನೂರಾರು ಮಂದಿಗೆ ಉದ್ಯೋಗ ಕೊಡಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಅವರಿಗೆ ನಾನೇ ಬಿಡಿಎ ಸೈಟ್ ಕೊಡಿಸಿದ್ದೆ. ಈಗ 70-80 ಕೋಟಿ ಮೌಲ್ಯದ ಶಿಕ್ಷಣ ಸಂಸ್ಥೆಯನ್ನು ಕಟ್ಟಿಸಿದ್ದಾರೆ ಎಂದು ತಿಳಿದವರು ಹೇಳುತ್ತಾರೆ ಎಂದು ಹೆಚ್ಡಿಕೆ ಕಿಡಿಕಾರಿದ್ದಾರೆ.