ಬೆಂಗಳೂರು, ಅ. 20 (DaijiworldNews/MB) : ಡ್ರಗ್ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಇಬ್ಬರು ಸ್ಯಾಂಡಲ್ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿಯವರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಿ, ಇಲ್ಲದಿದ್ದರೆ ಬಾಂಬ್ ಸ್ಪೋಟಿಸುತ್ತೇವೆ ಎಂದು ಬೆದರಿಕೆ ಪತ್ರವೊಂದು ಡ್ರಗ್ ಮತ್ತು ನಾರ್ಕೊಟಿಕ್ ಕೇಸುಗಳಿಗೆ ಸಂಬಂಧಪಟ್ಟ ವಿಶೇಷ ಕೋರ್ಟ್ ನ ನ್ಯಾಯಾಧೀಶರಿಗೆ ಬಂದಿದೆ ಎಂದು ವರದಿ ತಿಳಿಸಿದೆ.
ವಿಶೇಷ ಕೋರ್ಟ್ ನ ನ್ಯಾಯಾಧೀಶ ಜಿ ಎಂ ಶೀನಪ್ಪ ಅವರ ವಿಳಾಸಕ್ಕೆ ಕಳುಹಿಸಲಾಗಿರುವ ಈ ಪತ್ರದಲ್ಲಿ ಡಿಟೊನೇಟರ್ ಮಾದರಿಯ ವಸ್ತುವನ್ನು ಇಡಲಾಗಿದ್ದು, ಪತ್ರದಲ್ಲಿ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾಣಿಯವರನ್ನು, ಮತ್ತು ಡಿ ಜೆ ಹಳ್ಳಿ ದಂಧೆ ಗಲಭೆಕೋರರನ್ನು ಕೂಡಲೇ ಬಿಡುಗಡೆ ಮಾಡಿ ನ್ಯಾಯಾಧೀಶರ ಕಾರನ್ನು ಸ್ಪೋಟಿಸುತ್ತೇವೆ. ಪೊಲೀಸ್ ಆಯುಕ್ತ ಕಮಲ್ ಪಂತ್ ಮತ್ತು ಇತರ ಹಿರಿಯ ಅಧಿಕಾರಿಗಳಿಗೂ ಇದೇ ಸ್ಥಿತಿ ಎದುರಾಗುತ್ತದೆ ಎಂದು ಬೆದರಿಕೆ ಹಾಕಲಾಗಿದೆ.
ಈ ಪತ್ರದಲ್ಲಿ ಡಿಟೊನೇಟರ್ ಮಾದರಿಯ ವಸ್ತುವನ್ನು ಇಡಲಾಗಿದ್ದ ಹಿನ್ನೆಲೆ ಕೂಡಲೇ ನ್ಯಾಯಮೂರ್ತಿಗಳು ತಮ್ಮ ಸಿಬ್ಬಂದಿಯ ಮೂಲಕ ಪೊಲೀಸರಿಗೆ ತಿಳಿಸಿದ್ದು ಕೂಡಲೇ ಸ್ಥಳಕ್ಕೆ ಪೊಲೀಸ್ ಶ್ವಾನ ಮತ್ತು ಬಾಂಬ್ ಪತ್ತೆ ದಳ ಬಂದು ಶೋಧ ನಡೆಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸಿಸಿಬಿಯ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು. ಅದಕ್ಕಾಗಿ ವಿಶೇಷ ತಂಡಗಳನ್ನು ರಚಿಸಿದ್ದೇವೆ ಎಂದು ತಿಳಿಸಿದ್ದಾರೆ.