ಬೆಂಗಳೂರು, ಅ. 20 (DaijiworldNews/PY): ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಮಾಡಿರುವ ಸಾರಿಗೆ ಇಲಾಖೆ ಈಗ ಹೆಲ್ಮೆಟ್ ಧರಿಸದವರ ಚಾಲನಾ ಪರವಾನಗಿಯನ್ನು ಮೂರು ತಿಂಗಳು ಅಮಾನತು ಮಾಡಲು ನಿರ್ಧರಿಸಿದೆ.
ಅ.5ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ಬಗ್ಗೆ ಅ.16ರಂದು ರಾಜ್ಯದ ಎಲ್ಲಾ ಆರ್ಟಿಒಗಳಿಗೆ ಸುತ್ತೋಲೆ ರವಾನಿಸಿರುವ ಸಾರಿಗೆ ಇಲಾಖೆಯು, ಈಗಾಗಲೇ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸಿದರೆ ಮೋಟಾರು ವಾಹನ ಕಾಯ್ದೆಯಡಿ ದಂಡ ವಿಧಿಸಲಾಗುತ್ತದೆ. ಇನ್ನು ಇದರೊಂದಿಗೆ ಚಾಲಕರ ಚಾಲನಾ ಪರವಾನಗಿಯನ್ನು ಕೂಡಾ ಮೂರು ತಿಂಗಳ ಕಾಲ ಅಮಾನತು ಮಾಡಬೇಕು . ತಕ್ಷಣದಿಂದ ಈ ಆದೇಶವನ್ನು ಜಾರಿಗೊಳಿಸಬೇಕು ಎಂದು ಹೇಳಿದ್ದಾರೆ.
ಅಪಘಾತಗಳ ಸಂದರ್ಭ ಹೆಲ್ಮೆಟ್ ಧರಿಸದ ಸವಾರರೇ ಸಾವನ್ನಪ್ಪುತ್ತಿದ್ದಾರೆ. ಆದರೆ, ದಂಡ ವಿಧಿಸಿದರೂ ಕೂಡಾ ತಪ್ಪನ್ನು ತಿದ್ದಿಕೊಳ್ಳುತ್ತಿಲ್ಲ. ಈ ಕಾರಣದಿಂದ ಚಾಲನಾ ಪರವಾನಗಿಯನ್ನಯ ಮೂರು ತಿಂಗಳ ಕಾಲ ರದ್ದು ಮಾಡುವಂತೆ ರಾಜ್ಯ ಸರ್ಕಾರಕ್ಕೆ ರಸ್ತೆ ಸುರಕ್ಷತಾ ಸಮಿತಿಯು ತಿಳಿಸಿತ್ತು ಎಂದು ತಿಳಿಸಿದೆ.
ಈ ವಿಚಾರವಾಗಿ ವರದಿಯನ್ನು ತಯಾರು ಮಾಡಿ ಪ್ರತಿ ತಿಂಗಳ ಐದನೇ ತಾರೀಖಿನ ಒಳಗೆ ನಿಗದಿತ ನಮೂನೆಯಲ್ಲಿ ಕಚೇರಿಗೆ ನೀಡಬೇಕು ಎಂದು ಆಯುಕ್ತರು ಹೇಳಿದ್ದಾರೆ.