ನವದೆಹಲಿ, ಅ. 20 (DaijiworldNews/HR):ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದ ವೇಳೆ ವಿಷ ವಾಯು ಉಸಿರಾಟದಿಂದ ಇಬ್ಬರು ಕಾರ್ಮಿಕರು ಸಾವಿಗೀಡಾದ ಘಟನೆ ವಾಯವ್ಯ ದೆಹಲಿಯ ಆಜಾದ್ಪುರ್ ಪ್ರದೇಶದಲ್ಲಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಅಜಾದ್ಪುರ್ ಜಿ ಬ್ಲಾಕ್ನಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದ ಮೂವರು ಕಾರ್ಮಿಕರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದು, ತಕ್ಷಣವೇ ಅವರನ್ನು ಅಗ್ನಿಶಾಮಕದಳದ ವಾಹನ ಕಳುಹಿಸಿಕೊಟ್ಟಿದ್ದೇವೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸಲು ಏಳು ಮಂದಿ ಇಳಿದಿದ್ದು ಅವರಲ್ಲಿ ಮೂವರ ಪ್ರಜ್ಞೆ ತಪ್ಪಿ ಅವರನ್ನು ಬಿಜೆಆರ್ಎಂ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಸ್ಪತ್ರೆಗೆ ತಲುಪಿದಾಗ ಇದರೀಸ್ (45) ಮತ್ತು ಸಲೀಂ (45) ಇಬ್ಬರು ಮೃತಪಟ್ಟಿದ್ದು, ಅವರು ಉತ್ತರ ಪ್ರದೇಶದ ಖುರ್ಜಾದವರಾಗಿದ್ದಾರೆ ಎಂದು ಡಿಸಿಪಿ ವಿಜಯಾಂತ ಆರ್ಯ ಹೇಳಿದ್ದಾರೆ.
ಇನ್ನು ಉಳಿದ ನಾಲ್ಕು ಜನ ಕಾರ್ಮಿಕರಲ್ಲಿ ಅಬ್ದುಲ್ ಸದ್ದಾಂ (35), ಸಲೀಂ (35) ಮತ್ತು ಮನ್ಸೂರ್ ಅವರಿಗೆ ಚಿಕಿತ್ಸೆ ನೀಡಿ ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿದ್ದು, ಇಸ್ಲಾಂ (40) ಎಂಬವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.