ಆಲಿಘರ್, ಅ. 20 (DaijiworldNews/MB) : ಏಳು ವರ್ಷದ ಬಾಲಕನೋರ್ವ ತನ್ನ ಐದೂವರೆ ವರ್ಷದ ನೆರೆಹೊರೆಯ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆಘಾತಕಾರಿ ಘಟನೆ ಉತ್ತರ ಪ್ರದೇಶ ರಾಜ್ಯದ ಆಲಿಘರ್ನಲ್ಲಿ ನಡೆದಿದೆ.
ಪೊಲೀಸರು ಬಾಲಕನ ಮೇಲೆ ಪೋಕ್ಸೊ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿದ್ದಾರೆ. ಕಾವರ್ಸಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376 (ಅತ್ಯಾಚಾರ) ಮತ್ತು ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ಮಂಗಳವಾರ ಆರೋಪಿತ ಬಾಲಕನನ್ನು ಜುವೆನೈಲ್ ಜಸ್ಟೀಸ್ (ಜೆಜೆ) ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ (ಅಪರಾಧ) ಅರವಿಂದ್ ಕುಮಾರ್ ತಿಳಿಸಿದ್ದಾರೆ.
ಬಾಲಕಿಯು ತನ್ನ ಚೆಂಡನ್ನು ನೆರೆ ಮನೆಯ ಬಾಲಕನಿಂದ ಪಡೆಯಲು ಹೋಗಿದ್ದ ಸಂದರ್ಭದಲ್ಲಿ ಬಾಲಕನು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿಯು ಮಕ್ಕಳ ಕಲ್ಯಾಣ ಅಧಿಕಾರಿಗೆ ತಿಳಿಸಿದ್ದಾಳೆ. ಬಾಲಕಿಯ ತಾಯಿ ಸಲ್ಲಿಸಿರುವ ದೂರಿನ ಪ್ರಕಾರ ಅಕ್ಟೋಬರ್ 12 ರಂದು ಈ ಘಟನೆ ನಡೆದಿದೆ.
"ನನ್ನ ಮಗಳು ಟೆರೇಸ್ನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೆರೆಮನೆಯಲ್ಲಿಗೆ ಚೆಂಡು ಬಿದ್ದಿದ್ದು ಅದನ್ನು ತೆಗೆದುಕೊಳ್ಳಲು ನೆರೆಮನೆಗೆ ತೆರಳಿದ್ದಳು. ಆಕೆಯನ್ನು ಪಕ್ಕದ ಮನೆಯ ಬಾಡಿಗೆದಾರನ ಮಗನು ಹಿಡಿದುಕೊಂಡನು" ಎಂದು ಆರೋಪಿಸಿದ್ದಾರೆ.
"ಬಾಲಕನ ವಯಸ್ಸನ್ನು ದೂರಿನಲ್ಲಿ ಉಲ್ಲೇಖಿಸಲಾಗಿಲ್ಲವಾದರೂ, ವೈದ್ಯಕೀಯ ಪರೀಕ್ಷೆಯಲ್ಲಿ ಅವನಿಗೆ ಏಳು ವರ್ಷ ವಯಸ್ಸಾಗಿದೆ ಎಂದು ತಿಳಿದುಬಂದಿದೆ" ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಬಾಲಕನು ತನ್ನ ಪೋಷಕರೊಂದಿಗೆ ಇದ್ದಾನೆ.
ಏಳು ವರ್ಷಕ್ಕಿಂತ ಮೇಲ್ಪಟ್ಟ ಮತ್ತು ಹನ್ನೆರಡು ವರ್ಷದೊಳಗಿನ ಮಕ್ಕಳಿಂದ ಮಾಡಲ್ಪಟ್ಟ ತಪ್ಪು ಅಪರಾಧವಲ್ಲ. ಆ ವಯಸ್ಸಿನಲ್ಲಿ ಅವರಿಗೆ ಅರ್ಥಮಾಡಿಕೊಳ್ಳುವಷ್ಟು ಪ್ರಬುದ್ಧತೆ ಹಾಗೂ ಪರಿಣಾಮ ತಿಳಿದಿರುವುದಿಲ್ಲ ಎಂದು ಐಪಿಸಿಯ ಸೆಕ್ಷನ್ 83 ತಿಳಿಸುತ್ತದೆ.