ವಿಜಯಪುರ,ಅ. 20 (DaijiworldNews/HR): ಯಡಿಯೂರಪ್ಪ ಇನ್ನು ಬಹಳ ದಿನ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ. ಉತ್ತರ ಕರ್ನಾಟಕದವರನ್ನು ಮುಖ್ಯಮಂತ್ರಿ ಮಾಡುವುದಾಗಿ ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಲ್ಲ ಅನುದಾನವನ್ನು ಶಿವಮೊಗ್ಗಕ್ಕೆ ಕೊಂಡೊಯ್ಯುತ್ತಿದ್ದಾರೆ. ವಿಜಯಪುರ ನಗರದ ಅಭಿವೃದ್ಧಿಗೆ ಬಂದಿದ್ದ 125 ಕೋಟಿ ರೂ. ಅನುದಾನ ಕಡಿತ ಮಾಡಿದ್ದಕ್ಕೆ ನನಗೆ ಮತ್ತು ಮುಖ್ಯಮಂತ್ರಿಗಳಿಗೆ ಜಗಳವಾಗಿದೆ. ಬಿಜೆಪಿ ಬೆಂಬಲಿಸಿದ ಉತ್ತರ ಕರ್ನಾಟಕದವರಿಂದಲೇ ಮುಖ್ಯಮಂತ್ರಿ ಆಗುತ್ತಿದ್ದರೂ ಎಂಬುದನ್ನು ಮರೆತಿದ್ದಾರೆ. ಹೀಗಾಗಿ ಮುಂದಿನ ಮುಖ್ಯಮಂತ್ರಿ ಉತ್ತರ ಕರ್ನಾಟಕದವರಿಗೇ ಆದ್ಯತೆ ಎಂದು ಪ್ರಧಾನಿ ಹೇಳಿದ್ದು, ಮುಖ್ಯಮಂತ್ರಿ ಸ್ಥಾನದಲ್ಲಿ ಯಡಿಯೂರಪ್ಪ ಬಹಳ ದಿನ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪ್ರಬಲವಾಗಿದ್ದು, ನೂರಕ್ಕೂ ಹೆಚ್ಚು ಶಾಸಕರು ಆಯ್ಕೆಯಾದರೂ, 10-15 ಶಾಸಕರು ಆಯ್ಕೆಯಾಗುವ ದಕ್ಷಿಣ ಕರ್ನಾಟಕದವರು ಮುಖ್ಯಮಂತ್ರಿ ಆಗುತ್ತಾರೆ ಎಂದರು.
ನನ್ನ ಕ್ಷೇತ್ರಕ್ಕೆ ಬಂದ ಅನುದಾನವನ್ನು ಹಿಂಪಡೆದ ಕಾರಣ ನಗರದಲ್ಲಿ ಅಭಿವೃದ್ಧಿ ಹಿನ್ನಡೆಯಾಗಿದೆ. ಸದ್ಯ ಉತ್ತರ ಕರ್ನಾಟಕವರು ದಕ್ಷಿಣ ಕರ್ನಾಟಕದವರ ಮನೆ ಬಾಗಿಲು ಕಾಯುವ ಸ್ಥಿತಿ ಎದುರಾಗಿದೆ ಎಂದು ಹೇಳಿದ್ದಾರೆ.