ಬೆಂಗಳೂರು,ಅ. 20 (DaijiworldNews/HR): ಡ್ರಗ್ಸ್ ದಂಧೆ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಪತ್ರವೊಂದನ್ನು ಬರೆದಿದ್ದರು ಎನ್ನಲಾದ ಅನುಮಾನದ ಮೇರೆಗೆ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತುಮಕೂರಿನ ರಾಜಶೇಖರ್, ವೇದಾಂತ್, ಶಿವಪ್ರಕಾಶ್, ರಮೇಶ್ ಎಂಬುವರನ್ನು ವಶಕ್ಕೆ ಪಡೆಯಲಾಗಿದ್ದು, ನಾಲ್ವರನ್ನು ಬೆಂಗಳೂರಿಗೆ ಕರೆತಂದು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಾಲ್ವರು ಸಂಬಂಧಿಕರಾಗಿದ್ದು, ಆಸ್ತಿ ಹಂಚಿಕೆ ಸಂಬಂಧ ಅವರ ನಡುವೆ ಮನಸ್ತಾಪವಿದ್ದು, ಅದೇ ಕಾರಣಕ್ಕೆ ರಾಜಶೇಖರ್ ಎಂಬಾತ, ಶಿವಪ್ರಕಾಶ್, ವೇದಾಂತ್ ಹಾಗೂ ರಮೇಶ್ ಹೆಸರಿನಲ್ಲಿ ಪತ್ರ ಬರೆದಿದ್ದ ಎಂದು ತಿಳಿದು ಬಂದಿದೆ ಎಂದೂ ಅವರು ಮಾಹಿತಿ ನೀಡಿರು.
ಇನ್ನು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ಇಬ್ಬರು ಸ್ಯಾಂಡಲ್ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾಣಿಯವರನ್ನು ತಕ್ಷಣ ಜೈಲಿನಿಂದ ಬಿಡುಗಡೆ ಮಾಡಿ, ಇಲ್ಲದಿದ್ದರೆ ಬಾಂಬ್ ಸ್ಪೋಟಿಸುತ್ತೇವೆ ಎಂದು ಬೆದರಿಕೆ ಪತ್ರವೊಂದು ಡ್ರಗ್ ಮತ್ತು ನಾರ್ಕೊಟಿಕ್ ಕೇಸುಗಳಿಗೆ ಸಂಬಂಧಪಟ್ಟ ವಿಶೇಷ ಕೋರ್ಟ್ ನ ನ್ಯಾಯಾಧೀಶರಿಗೆ ಬರೆದಿದ್ದಾರೆ.