ಬಾಗಲಕೋಟೆ, ಅ. 20 (DaijiworldNews/MB) : ಮುಖ್ಯಮಂತ್ರಿ ಸ್ಥಾನದಿಂದ ಸಿಎಂ ಸ್ಥಾನದಿಂದ ಯಡಿಯೂರಪ್ಪರನ್ನು ಕೆಳಗಿಳಿಸುವ ಯತ್ನ ಬಿಜೆಪಿಯಿಂದ ನಡೆದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಶಾಸಕ ಬಸನಗೌಡ ಯತ್ನಾಳ ಅವರು ಯಡಿಯೂರಪ್ಪ ಬಹಳ ದಿನ ಸಿಎಂ ಆಗಿರುವುದಿಲ್ಲ ಎಂಬ ಹೇಳಿಕೆ ನೀಡಿದ ಬಗ್ಗೆ ಮಂಗಳವಾರ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನಾವಂತೂ ಸರ್ಕಾರವನ್ನು ಬೀಳಿಸಲು ಮುಂದಾಗಲ್ಲ. ಆದರೆ ಬಿಜೆಪಿಯವರೇ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಯತ್ನದಲ್ಲಿದ್ದಾರೆ. ಯತ್ನಾಳ ಅವರ ಕ್ಷೇತ್ರದ ಅನುದಾನ ಕಡಿತದ ಬಳಿಕ ಅವರು ಸಿಎಂ ಮೇಲೆ ಅಸಮಾಧಾನಗೊಂಡಿದ್ದಾರೆ. ಹಾಗಾಗಿ ಸತ್ಯ ಹೇಳಲು ಆರಂಭಿಸಿದ್ದಾರೆ. ಅವರ ಆಂತರಿಕ ಗಲಾಟೆಯಿಂದಾಗಿ ಸರ್ಕಾರ ಉರುಳಿದರೆ ನಾವು ಮತ್ತೆ ಚುನಾವಣೆ ಎದುರಿಸಲು ಸಿದ್ದರಾಗಿದ್ದೇವೆ ಎಂದು ಹೇಳಿದರು.
ಹಾಗೆಯೇ ಬಿಎಸ್ವೈ ಅವರನ್ನು ಕೆಳಗಿಳಿಸುವ ಚರ್ಚೆ ಬಿಜೆಪಿಯಲ್ಲಿ ನಡೆಯುತ್ತಿರುವುದಂತೂ ಸತ್ಯ. ಆದರೆ ಅವರನ್ನು ಕೆಳಗಿಳಿಸಿ ಯಾರು ಮುಖ್ಯಮಂತ್ರಿಯಾಗ್ತಾರೆ ಎಂದು ತಿಳಿದಿಲ್ಲ ಎಂದರು.
ಇನ್ನು ಈ ಸಂದರ್ಭದಲ್ಲೇ ಉತ್ತರ ಕನಾ೯ಟಕ ಭಾಗದವರು ಸಿಎಂ ಆಗಲಿದ್ದಾರೆ ಎಂಬ ಯತ್ನಾಳ ಅವರ ಹೇಳಿಕೆಗೆ ಸಂಬಂಧಿಸಿ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಅವರ ಪಕ್ಷದ ವಿಚಾರ, ನಾವ್ಯಾಕೆ ಮಾಡನಾಡಬೇಕು. ಅದರ ಬಗ್ಗೆ ಯಡಿಯೂರಪ್ಪನವರು ಮಾತನಾಡಲಿ ಎಂದು ಹೇಳಿದರು.
ಇನ್ನು ಈ ವೇಳೆಯೇ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ಅವರು, ಹೆಚ್ಡಿಕೆ ವರ್ತನೆ ಕುಣಿಲಾರದವರು ನೆಲ ಡೊಂಕು ಅಂದರಂತೆ ಎಂಬಂತಾಗಿದೆ. ಮುಖ್ಯಮಂತ್ರಿ ಆಗಿದ್ದಾಗ ಕೆಲಸ ಮಾಡಲು ಆಗದವರು ಈಗ ಸಮ್ಮಿಶ್ರ ಸರ್ಕಾರ ಬೀಳಲು ನಾನು ಕಾರಣ ಎಂದು ಹೇಳುತ್ತಾರೆ. ಅವರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ ಎಂದು ಹೇಳಿದರು.