ಬೆಂಗಳೂರು,ಅ. 20 (DaijiworldNews/HR): ಅಭಿವೃದ್ಧಿ, ಜನರ ಕೌಶಲ್ಯ, ಶಿಕ್ಷಣ ಇತ್ಯಾದಿಗಳ ಮಹತ್ವ ಗೊತ್ತಿಲ್ಲದ ನಾಯಕರು ಜನರನ್ನು ಸದಾ ಕತ್ತಲೆಯಲ್ಲೇ ಇಟ್ಟು, ಸಮಸ್ಯೆಗಳನ್ನು ಯಾವಾಗಲೂ ಜೀವಂತವಾಗಿಟ್ಟುಕೊಂಡು ಜನರ ಕಣ್ಣೀರಿನ ಮೇಲೆ ರಾಜಕೀಯ ಮಾಡುವುದೇ ಕಾಂಗ್ರೆಸ್ ಮತ್ತು ಜೆಡಿಎಸ್ ಚಾಳಿ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಕುರಿತು ಶಿರಾ ವಿಧಾನಸಭಾ ಕ್ಷೇತ್ರದ ಮತದಾರರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇಷ್ಟು ದಿನ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರಿಗೆ ಸಮಸ್ಯೆಗಳ ಅರಿವೇ ಇಲ್ಲ. ಹಾಗಾಗಿ ಜನರ ಸಮಸ್ಯೆಗಳ ಪರಿಹಾರದ ಬಗ್ಗೆ ಮಾತನಾಡುವುದು ಎಲ್ಲಿಂದ ಬಂತು ಎಂದರು.
ಇನ್ನು ಕೆಲವು ನಾಯಕರಿಗೆ ಮತ್ತು ಪಕ್ಷಗಳಿಗೆ ಚುನಾವಣೆ ಎಂದರೆ ಭಾವನಾತ್ಮಕ ವಿಷಯಗಳನ್ನು ಕೆದಕುವುದು ಹಾಗೂ ಜಾತಿ ವಿಚಾರಗಳನ್ನು ಮುನ್ನೆಲೆಗೆ ತಂದು ಬೇಳೆ ಬೇಯಿಸಿಕೊಳ್ಳುವುದು ಅಭ್ಯಾಸವಾಗಿದೆ ಎಂದರು.
ಕೆಲವು ನಾಯಕರಿಗೆ ತಾವು, ತಮ್ಮ ಮಕ್ಕಳು ಹಾಗೂ ಮೊಮ್ಮಕ್ಕಳನ್ನು ರಾಜಕೀಯ ಬೆಳೆಸಿಕೊಳ್ಳುವುದೇ ಆಗಿದೆ. ನಿರಂತರವಾಗಿ ಜಾತಿ ಹೆಸರು ಹೇಳಿಕೊಂಡೇ ತಮ್ಮ ಕುಟುಂಬಗಳನ್ನು ಬೆಳೆಸಿಕೊಂಡರು, ಮನೆಯಲ್ಲಿ ಇದ್ದವರೆಲ್ಲರನ್ನೂ ನಾಯಕರನ್ನಾಗಿ ಬೆಳೆಸಿಕೊಂಡವರೆ ಹೆಚ್ಚು ಎಂದು ಹೇಳಿದ್ದಾರೆ.