ಲಖನೌ, ಅ. 20 (DaijiworldNews/PY): ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪಕ್ಷದ ನಾಯಕನ ಪರವಾಗಿ ಭೌತವಿಜ್ಞಾನಿ ಐಸಾಕ್ ನ್ಯೂಟನ್ ಅವರ ಮೂರನೇ ನಿಯಮವನ್ನು ಉಲ್ಲೇಖಿಸಿರುವ ಬಿಜೆಪಿ ಪಕ್ಷದ ಶಾಸಕ ಸುರೇಂದ್ರ ಸಿಂಗ್ ಅವರಿಗೆ ಉತ್ತರ ಪ್ರದೇಶದ ಸ್ಥಳೀಯ ಬಿಜೆಪಿ ಘಟಕ ಶೋಕಾಸ್ ನೋಟಿಸ್ ನೀಡಿದೆ.
ಶೋಕಾಸ್ ನೋಟಿಸ್ ತಲುಪಿದ ಒಂದು ವಾರದ ಒಳಗಾಗಿ ಪ್ರತಿಕ್ರಿಯಿಸಬೇಕು. ಅಲ್ಲಿ ತನಕ ಯಾವುದೇ ರೀತಿಯಾದ ಹೇಳಿಕೆಯನ್ನು ನೀಡಬಾರದು ಎಂದು ಹೇಳಿರುವುದಾಗಿ ಸುದ್ದಿ ಸಂಸ್ಥೆಗೆ ಬಿಜೆಪಿ ಮುಖಂಡ ಸ್ವತಂತ್ರ ದೇವ್ ಸಿಂಗ್ ತಿಳಿಸಿದ್ದಾರೆ.
ನ್ಯಾಯಬೆಲೆ ಅಂಗಡಿಗಳ ಹಂಚಿಕೆಯ ಬಗ್ಗೆ ಬಲ್ಲಿಯಾ ಜಿಲ್ಲೆಯ ದುರ್ಜನ್ಪುರ ಗ್ರಾಮದಲ್ಲಿ ಗುರುವಾರ ಅಧಿಕಾರಿಗಳ ಸಭೆ ನಡೆದಿದ್ದು ಈ ಸಭೆಯಲ್ಲಿ ವಾಗ್ವಾದ ನಡೆದ ಸಂದರ್ಭ ಶಾಸಕರ ಸಹಾಯಕ ಧೀರೇಂದ್ರ ಸಿಂಗ್, ತನ್ನ ಪ್ರತಿಸ್ಪರ್ಧಿ ಜೈಪ್ರಕಾಶ್ ಪಾಲ್ ಎಂಬವರ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಹತ್ಯೆಗೈದಿದ್ದರು.
ಈ ಹತ್ಯೆಯನ್ನು ಸಮರ್ಥಿಸಿಕೊಂಡಿರುವ ಶಾಸಕರು ಪ್ರತಿಯೊಂದು ಕ್ರಿಯೆಗೂ ಪ್ರತಿಕ್ರಿಯೆ ಇದ್ದೇ ಇರುತ್ತದೆ. ಧೀರೇಂದ್ರ ತನ್ನ ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾನೆ. ಯಾರಾದರೂ ಒಬ್ಬರಿಗೆ ಹೊಡೆದರೆ, ಅವರು ತಿರುಗಿ ಹೊಡೆಯುವುದು ಸಹಜ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಸಿಕ್ಕೇ ಸಿಗುತ್ತದೆ ಎಂದು ನನ್ನ ನಂಬಿಕೆ ಎಂದು ಹೇಳಿದ್ದರು.